ಅಧಿವೇಶನದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದರು
ನವದೆಹಲಿ: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಚರ್ಚೆಗೆ ಅವಕಾಶ ನೀಡಬೇಕು ಎಂದು ವಿರೋಧ ಪಕ್ಷಗಳು ಬುಧವಾರವೂ ಪಟ್ಟು ಹಿಡಿದಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಬೆಳಿಗ್ಗೆ 11 ಗಂಟೆಗೆ ಕಲಾಪ ಸಮಾವೇಶಗೊಂಡು ಸಂತಾಪ ಸೂಚನೆ ಸಲ್ಲಿಸಿದ ಮರುಕ್ಷಣವೇ ವಿರೋಧ ಪಕ್ಷಗಳು ಎಸ್‌ಐಆರ್ ಚರ್ಚೆಗೆ ಒತ್ತಾಯಿಸಿ, ಪ್ರತಿಭಟನೆ ನಡೆಸಿದ್ದರಿಂದ, ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.
ಕಲಾಪವು ಮಧ್ಯಾಹ್ನ ಮತ್ತೆ ಆರಂಭವಾಗುತ್ತಿದ್ದಂತೆ ಸಭಾಪತಿ ಪೀಠದಲ್ಲಿದ್ದ ಭುವನೇಶ್ವರ ಕಲಿತಾ ಅವರು ಸಮುದ್ರಯಾನದ ಮೂಲಕ ಸರಕುಗಳ ಸಾಗಣೆ ಮಸೂದೆ–2020ನ್ನು ಕೈಗೆತ್ತಿಕೊಳ್ಳುವಂತೆ ಸೂಚಿಸಿದರು. ಇದಕ್ಕೆ ವಿರೋಧ ಪಕ್ಷದ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೋಲಾಹಲದ ನಡುವೆಯೇ ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಯಿತು. ಈ ಮಸೂದೆಯು ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿದೆ.
ಬಳಿಕ, ಪೀಠಕ್ಕೆ ಬಂದ ಉಪಸಭಾಪತಿ ಹರಿವಂಶ್ ಅವರು, ‘ನಿಯಮ 267ರಡಿ 35 ನೋಟಿಸ್‌ಗಳನ್ನು ಸ್ವೀಕರಿಸಲಾಗಿತ್ತು. ಇವು ನಿಯಮಾವಳಿ ಪ್ರಕಾರ ಇಲ್ಲದಿದ್ದರಿಂದ ತಿರಸ್ಕರಿಸಲಾಗಿದೆ’ ಎಂದು ತಿಳಿಸಿದರು.
ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.