
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಅರ್ಹ ವ್ಯಕ್ತಿಗಳು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಂಚೋಲಿ ಅವರಿದ್ದ ಪೀಠವು, ಫೆಬ್ರುವರಿ 9ರೊಳಗೆ ಚುನಾವಣಾ ಆಯೋಗ ಮತ್ತು ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ ಈ ಬಗ್ಗೆ ಉತ್ತರ ನೀಡುವಂತೆ ಸೂಚಿಸಿದೆ.
ಮತದಾರರ ಪಟ್ಟಿ ಪರಿಷ್ಕರಣೆಯ ಸಮಯದಲ್ಲಿ ಕೆಲವೊಮ್ಮೆ ವಲಸೆ ಹೋಗಿರುವುದನ್ನು ಪರಿಗಣಿಸಿರಬಹುದು, ಆದರೆ ಅರ್ಹ ವ್ಯಕ್ತಿಗಳು ಮತದಾರರ ಪಟ್ಟಿಯಲ್ಲಿ ಉಳಿಯಬೇಕು ಎಂದು ಪೀಠ ಹೇಳಿದೆ.
ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆ. ಯಾವುದೇ ಅರ್ಹ ವ್ಯಕ್ತಿಯ ಹೆಸರು ಮತದಾರರ ಪಟ್ಟಿಯಿಂದ ಬಿಟ್ಟು ಹೋಗದಂತೆ ನಾವು ನೋಡಿಕೊಳ್ಳಬೇಕೆಂದು ಸಿಜೆಐ ಸೂರ್ಯ ಕಾಂತ್ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಜನರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ಎಸಲಾಗುತ್ತಿದೆ. ನಮಗೆ ಎಲ್ಲೂ ನ್ಯಾಯ ಸಿಗುತ್ತಿಲ್ಲ. ನಾನು ಚುನಾವಣಾ ಆಯೋಗಕ್ಕೆ ಆರು ಪತ್ರಗಳನ್ನು ಬರೆದಿದ್ದೇನೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೋರ್ಟ್‌ಗೆ ತಿಳಿಸಿದ್ದಾರೆ.
ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಸರಿಯಾದ ಕಾರಣಗಳನ್ನು ಅಪ್‌ಲೋಡ್ ಮಾಡಬೇಕು. ಸುಮಾರು 1.36 ಕೋಟಿ ಜನರಿಗೆ ಅರ್ಜಿ ದೋಷಪೂರಿತವಾಗಿದೆ ಎಂದು ನೋಟಿಸ್ ನೀಡಿದೆ ಎಂದು ಮಮತಾ ಪರ ವಕೀಲರು ವಾದಿಸಿದ್ದಾರೆ.
ಬ್ಯಾನರ್ಜಿ ಅವರು ಪ್ರಜಾಪ್ರಭುತ್ವ ಉಳಿಸಲು ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ (SIR) ಯಲ್ಲಿ ಮದ್ಯಪ್ರವೇಶಿಸುವಂತೆ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದರು. ರಾಜ್ಯವನ್ನು ಗುರಿಯಾಗಿಸಿ, ಬುಲ್ಡೋಜರ್ ಮೂಲಕ ಸುಲಿಗೆ ಮಾಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.