ADVERTISEMENT

ನಾಗಾಲ್ಯಾಂಡ್– ಮೇಘಾಲಯ ವಿಧಾನಸಭೆ ಚುನಾವಣೆ: ಮತದಾನ ಆರಂಭ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2023, 3:26 IST
Last Updated 27 ಫೆಬ್ರುವರಿ 2023, 3:26 IST
ನಾಗಾಲ್ಯಾಂಡ್‌ ಮತದಾನದ ಚಿತ್ರ
ನಾಗಾಲ್ಯಾಂಡ್‌ ಮತದಾನದ ಚಿತ್ರ   

ನವದೆಹಲಿ: ನಾಗಾಲ್ಯಾಂಡ್‌ ಮತ್ತು ಮೇಘಾಲಯ ವಿಧಾನಸಭೆಯ ಮತದಾನವು ಇಂದು (ಫೆಬ್ರುವರಿ 27) ನಡೆಯಲಿದೆ. ನಾಗಾಲ್ಯಾಂಡ್‌ ಮತ್ತು ಮೇಘಾಲಯ ಮತದಾನದ ಸಂದರ್ಭದಲ್ಲಿ ಬಿಗಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

60 ಕ್ಷೇತ್ರಗಳಿರುವ ಎರಡೂ ರಾಜ್ಯಗಳಲ್ಲೂ ತಲಾ 59 ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆಯಲಿದೆ. ನಾಗಾಲ್ಯಾಂಡ್‌ನ ಕ್ಷೇತ್ರವೊಂದರಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದುಕೊಂಡ ಕಾರಣ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೇಘಾಲಯದ ಶಿಲ್ಲಾಂಗ್‌ ವಿಧಾನಸಭಾ ಕ್ಷೇತ್ರದ ಯುನೈಟೆಡ್‌ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿಎಚ್‌.ಡಿ.ಆರ್. ಲಿಂಗ್ಡೊ ಅವರು ಮೃತಪಟ್ಟಿರುವುದರಿಂದ ಆ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ. ಎರಡೂ ರಾಜ್ಯಗಳಲ್ಲೂ ಉಗ್ರರ ದಾಳಿಯ ಭೀತಿ ಇರುವುದರಿಂದ ಬಿಗಿಭದ್ರತಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ರಾಜ್ಯದ 2,291 ಮತಗಟ್ಟೆಗಳಲ್ಲಿ ಸೋಮವಾರ ಬೆಳಗ್ಗೆ ಬೆಳಿಗ್ಗೆ 7 ಗಂಟೆಗೆಯಿಂದ ಮತದಾನ ಆರಂಭವಾಗಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. 11,500 ಮತಗಟ್ಟೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 13.16 ಲಕ್ಷ ಮತದಾರರನ್ನು ಹೊಂದಿದೆ. ನಾಲ್ವರು ಮಹಿಳಾ ಅಭ್ಯರ್ಥಿಗಳು ಸೇರಿದಂತೆ 183 ಅಭ್ಯರ್ಥಿಗಳ ಚುನಾವಣಾ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ನಾಗಾಲ್ಯಾಂಡ್‌ ಮುಖ್ಯ ಚುನಾವಣಾಧಿಕಾರಿ ಶಶಾಂಕ್ ಶೇಖರ್ ತಿಳಿಸಿದ್ದಾರೆ.

ADVERTISEMENT

ಮೇಘಾಲಯ ಮುಖ್ಯ ಚುನಾವಣೆ ಅಧಿಕಾರಿ ಎಫ್.ಆರ್. ಖಾರ್ಕೊಂಗೊರ್ ಅವರು, 60 ಸ್ಥಾನಗಳ ಪೈಕಿ 59 ಸ್ಥಾನಗಳಿಗೆ 3,419 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. 21.75 ಲಕ್ಷ ಮತದಾರರು 369 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ತ್ರಿಪುರಾ ಜೊತೆಗೆ ಮೇಘಾಲಯ ಮತ್ತು ನಾಗಾಲ್ಯಾಂಡ್ ಮತದಾನದ ಫಲಿತಾಂಶ ಮಾರ್ಚ್ 2 ರಂದು ಹೊರ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.