ADVERTISEMENT

ಸ್ಕೂಟರ್ ಮೇಲೆ ಮಾಡಿದ್ದು 2 ರೀಲ್ಸ್‌: FIR ಜತೆ ₹80 ಸಾವಿರ ದಂಡ ವಿಧಿಸಿದ ಪೊಲೀಸ್

ಪಿಟಿಐ
Published 27 ಮಾರ್ಚ್ 2024, 13:47 IST
Last Updated 27 ಮಾರ್ಚ್ 2024, 13:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೊಯಿಡಾ: ಇಬ್ಬರು ಮಹಿಳೆಯರು ಸೇರಿ ಒಟ್ಟು ಮೂವರು ಸ್ಕೂಟರ್‌ ಮೇಲೆ ಸವಾರಿ ಮಾಡುತ್ತಲೇ ಸಾಮಾಜಿಕ ಜಾಲತಾಣಕ್ಕಾಗಿ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಚಾರ ಠಾಣೆ ಪೊಲೀಸರು 2ನೇ ಬಾರಿ ₹47,500 ದಂಡ ವಿಧಿಸಿದ್ದಾರೆ. ಜತೆಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸಿದ್ದಾಗಿ ಅಂತರ್ಜಾಲ ಬಳಕೆದಾರರು ನೀಡಿದ ದೂರಿನ ಮೇಲೆ ಮೊದಲ ವಿಡಿಯೊ ಹಂಚಿಕೊಂಡ ಸ್ಕೂಟರ್ ಮಾಲೀಕನಿಗೆ ಈ ಮೊದಲು ₹33 ಸಾವಿರ ದಂಡ ವಿಧಿಸಲಾಗಿತ್ತು. ಈ ವಿಡಿಯೊ ಮಾರ್ಚ್ 25ರಂದು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗಿತ್ತು.

ಮತ್ತೆ ಅದೇ ಗುಂಪಿನಿಂದ ಮತ್ತೊಂದು ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಯುವಕ ಹಾಗೂ ಯುವತಿ ಇಬ್ಬರೂ ನಗರ ಪ್ರದೇಶದ ರಸ್ತೆಯಲ್ಲಿ ಹೆಲ್ಮೆಟ್‌ ಧರಿಸದೇ ಸ್ಕೂಟರ್ ಚಾಲನೆ ಮಾಡುತ್ತಿದ್ದರು. ನಿರ್ಲಕ್ಷ್ಯ ಚಾಲನೆಗಾಗಿ ಮೋಟಾರು ವಾಹನ ಕಾಯ್ದೆಯಡಿ ಇ–ಚಲನ್ ಮೂಲಕ ದಂಡ ವಿಧಿಸಲಾಗಿದೆ. ಇದರಿಂದಾಗಿ ವಾಹನದ ಮಾಲೀಕರಿಗೆ ಎರಡು ಪ್ರಕರಣಗಳಲ್ಲಿ ಒಟ್ಟು ₹80,500ರಷ್ಟು ದಂಡ ವಿಧಿಸಲಾಗಿದೆ ಎಂದು ಸಂಚಾರ ವಿಭಾಗದ ಡಿಸಿಪಿ ಅನಿಲ್ ಕುಮಾರ್ ಯಾದವ್ ಪಿಟಿಐಗೆ ತಿಳಿಸಿರುವುದಾಗಿ ವರದಿಯಾಗಿದೆ.

ADVERTISEMENT

‘ಮಾರ್ಚ್ 25ರಂದು ಹಂಚಿಕೊಂಡಿರುವ ಮೊದಲ ವಿಡಿಯೊದಲ್ಲಿ ನೊಯಿಡಾದ ಸೆಕ್ಟರ್ 113ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕನೊಬ್ಬ ಅಜಾಗರೂಕತೆಯಿಂದ ಸ್ಕೂಟರ್ ಚಾಲನೆ ಮಾಡುತ್ತಿದ್ದ. ಆತನೊಂದಿಗೆ ಪ್ರಯಾಣಿಸುತ್ತಿದ್ದ ಯುವತಿಯು ಅಷ್ಟೇ ಅಜಾಗರೂಕತೆಯಿಂದ ಮತ್ತು ಅಸಭ್ಯವಾಗಿ ವರ್ತಿಸುತ್ತಾ ವಿಡಿಯೊ ಚಿತ್ರೀಕರಣ ಮಾಡುತ್ತಿದ್ದಳು. ನಂತರ ಈ ವಿಡಿಯೊವನ್ನು ಅವರು ಹಂಚಿಕೊಂಡಿದ್ದರು. ಈ ಕುರಿತು ನೆಟ್ಟಿಗರಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು’ ಎಂದು ಪ್ರಕರಣದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.