ADVERTISEMENT

ವಕ್ಫ್ ಕಾಯ್ದೆಯಲ್ಲಿ ಗಂಭೀರ ಕಾರ್ಯವಿಧಾನದ ಲೋಪ: ಸುಪ್ರೀಂ ಕೋರ್ಟ್‌ಗೆ ಮಹುವಾ ಅರ್ಜಿ

ಪಿಟಿಐ
Published 10 ಏಪ್ರಿಲ್ 2025, 9:57 IST
Last Updated 10 ಏಪ್ರಿಲ್ 2025, 9:57 IST
<div class="paragraphs"><p>ಮಹುವಾ ಮೊಯಿತ್ರಾ</p></div>

ಮಹುವಾ ಮೊಯಿತ್ರಾ

   

-ಪಿಟಿಐ ಚಿತ್ರ

ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ–2025ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಎಐಎಂಐಎಂ ಸಂಸದ ಅಸಾದುದ್ದೀನ್ ಒವೈಸಿ ಸೇರಿದಂತೆ 10 ಮಂದಿ ಸಲ್ಲಿಸಿರುವ ಅರ್ಜಿಯ ವಿವಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ನೇತೃತ್ವದ ತ್ರಿಸದಸ್ಯ ಪೀಠ ಏಪ್ರಿಲ್ 16ಕ್ಕೆ ನಿಗದಿ ಪಡಿಸಿದೆ.

ಮೊಯಿತ್ರಾ ಅವರು ಏಪ್ರಿಲ್ 9ರಂದು ಅರ್ಜಿ ಸಲ್ಲಿಸಿದ್ದು, ತಿದ್ದುಪಡಿ ಕಾಯ್ದೆಯಲ್ಲಿ ಗಂಭೀರ ಕಾರ್ಯವಿಧಾನದ ಲೋಪಗಳು ಇವೆ. ಅಲ್ಲದೆ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಹಲವಾರು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

ಕಾನೂನು ರೂಪಿಸುವ ವೇಳೆ ಸಂಸದೀಯ ನಡಾವಳಿಗಳನ್ನು ಉಲ್ಲಂಘಿಸಲಾಗಿದೆ. ಇದರಿಂದಾಗಿ ಕಾನೂನು ಅಸಂವಿಧಾನಿಕವಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

‘ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿಯ ಕರಡು ವರದಿಯ ಪರಿಗಣನೆ ಹಾಗೂ ಅಂಗೀಕಾರದ ಹಂತದಲ್ಲಿ ಮತ್ತು ಸಂಸತ್ತಿನ ಮುಂದೆ ಸದರಿ ವರದಿಯನ್ನು ಮಂಡಿಸುವ ಹಂತ ಎರಡರಲ್ಲೂ ಸಂಸದೀಯ ನಿಯಮಗಳು ಮತ್ತು ಶಿಷ್ಟಾಚಾರಗಳನ್ನು ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಉಲ್ಲಂಘಿಸಿದ್ದಾರೆ’ ಎಂದು ಅರ್ಜಿ ಹೇಳಿದೆ.

2025ರ ಫೆಬ್ರುವರಿ 13ರಂದು ಸಲ್ಲಿಸಲಾದ ಅಂತಿಮ ವರದಿಯಲ್ಲಿ ವಿರೋಧ ಪಕ್ಷಗಳ ಸದಸ್ಯರ ವಿರೋಧಿ ಅಭಿಪ್ರಾಯಗಳನ್ನು ಕಾರಣವಿಲ್ಲದೆ ಪರಿಷ್ಕರಿಸಲಾಗಿದೆ. ಇಂತಹ ಕ್ರಮಗಳು ಸಂಸತ್ತಿನ ಚರ್ಚಾ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತವೆ, ಅಧಿಕೃತ ಸಂಸದೀಯ ಕಾರ್ಯವಿಧಾನದ ಕೈಪಿಡಿಗಳಲ್ಲಿ ವಿವರಿಸಿರುವಂತೆ ಸ್ಥಾಪಿತ ಮಾನದಂಡಗಳನ್ನು ಉಲ್ಲಂಘಿಸುತ್ತವೆ ಎಂದು ಅದು ಹೇಳಿದೆ.

ಹೊಸ ಕಾನೂನು ಸಂವಿಧಾನದ 14ನೇ ವಿಧಿ (ಕಾನೂನಿನ ಮುಂದೆ ಸಮಾನತೆ), 15(1) (ತಾರತಮ್ಯ ಮಾಡದಿರುವುದು), 19(1)(ಎ) ಮತ್ತು (ಸಿ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ), 21 (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯ), 25 ಮತ್ತು 26 (ಧಾರ್ಮಿಕ ಸ್ವಾತಂತ್ರ್ಯ), 29 ಮತ್ತು 30 (ಅಲ್ಪಸಂಖ್ಯಾತರ ಹಕ್ಕುಗಳು), ಮತ್ತು 300ಎ ವಿಧಿ (ಆಸ್ತಿಯ ಹಕ್ಕು) ಗಳನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕಾನೂನು ರೂಪಿಸುವ ವೇಳೆ ಕಾರ್ಯವಿಧಾನದ ಅಕ್ರಮಗಳು ಮತ್ತು ಸಂವಿಧಾನದ ಉಲ್ಲಂಘನೆಗಳನ್ನು ಉಲ್ಲೇಖಿಸಿರುವ ಮೊಯಿತ್ರಾ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವಂತೆ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.