ADVERTISEMENT

ಪಶ್ಚಿಮ ಬಂಗಾಳದಲ್ಲಿ ವಕ್ಫ್‌ ಕಾಯ್ದೆ ಅನುಷ್ಠಾನ ಮಾಡಲ್ಲ: ಸಿಎಂ ಮಮತಾ ಬ್ಯಾನರ್ಜಿ

ಪಿಟಿಐ
Published 9 ಏಪ್ರಿಲ್ 2025, 11:16 IST
Last Updated 9 ಏಪ್ರಿಲ್ 2025, 11:16 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ   

ಕೋಲ್ಕತ್ತ: ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿ ಅನುಷ್ಠಾನ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ತಿಳಿಸಿದರು.

ಜೈನ ಸಮುದಾಯದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಅಲ್ಪಸಂಖ್ಯಾತ ಜನರನ್ನು ಮತ್ತು ಅವರ ಆಸ್ತಿಯನ್ನು ರಕ್ಷಿಸುತ್ತೇನೆ’ ಎಂದು ಭರವಸೆ ನೀಡಿದರು.

‘ವಕ್ಫ್‌ ತಿದ್ದುಪಡಿ ಕಾಯ್ದೆಯಿಂದ ನಿಮಗೆ ತೊಂದರೆಯಾಗಿದೆ ಎಂದು ನನಗೆ ಗೊತ್ತು. ನಂಬಿಕೆ ಇಡಿ; ಬಂಗಾಳದಲ್ಲಿ ಏನೂ ಆಗುವುದಿಲ್ಲ’ ಎಂದು ಹೇಳಿದರು.

ADVERTISEMENT

ಮುರ್ಶಿದಾಬಾದ್‌ನಲ್ಲಿ ತಿದ್ದುಪಡಿ ಕಾಯ್ದೆ ವಿಚಾರವಾಗಿ ನಡೆದ ಗಲಭೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ, ‘ರಾಜಕೀಯ ಚಳವಳಿ ರೂಪಿಸಲು ಪ್ರಚೋದಿಸುವವರತ್ತ ಗಮನ ನೀಡಬೇಡಿ’ ಎಂದು ಕರೆ ನೀಡಿದರು.

 ‘ಬಂಗಾಳ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು  ಭಾರತ ಎಲ್ಲವೂ ಒಟ್ಟಿಗೇ ಇದ್ದವು, ಬಳಿಕ ವಿಭಜನೆ ಆದವು ಎಂದು ಇತಿಹಾಸ ಹೇಳುತ್ತದೆ. ಇಲ್ಲಿ ಇರುವವರನ್ನು ರಕ್ಷಿಸುವುದು ನಮ್ಮ ಕರ್ತವ್ಯ’ ಎಂದರು.

ನಾನು ಎಲ್ಲ ಧರ್ಮಗಳ ಧಾರ್ಮಿಕ ಸ್ಥಳಗಳಿಗೂ ಭೇಟಿ ನೀಡುತ್ತೇನೆ. ನನ್ನನ್ನು ಕೊಂದರೂ ಸರಿ; ಈ ವಿಷಯದಲ್ಲಿ ನನ್ನ ಬದಲಾಯಿಸಲು ಸಾಧ್ಯವಿಲ್ಲ.  ಪ್ರತಿ ಧರ್ಮ, ಜಾತಿ, ಪಂಥವೂ ಮಾನವೀಯತೆಗಾಗಿಯೇ ಪ್ರಾರ್ಥಿಸುತ್ತದೆ ಎಂದು ಹೇಳಿದರು.

ವಕ್ಫ್‌ ಮಸೂದೆಯು ಲೋಕಸಭೆಯಲ್ಲಿ ಏಪ್ರಿಲ್‌ 3ರಂದು ಮತ್ತು ರಾಜ್ಯಸಭೆಯಲ್ಲಿ ಏಪ್ರಿಲ್‌ 4ರಂದು ಅಂಗೀಕಾರವಾಗಿತ್ತು. ಏಪ್ರಿಲ್ 5ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಮಸೂದೆಗೆ ಅಂಕಿತ ಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.