ADVERTISEMENT

ಕಾಂಗ್ರೆಸ್ ತೊರೆದದ್ದಕ್ಕೆ ಕಾರಣ ಹೇಳಿದ ಗುಲಾಂ ನಬಿ ಆಜಾದ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2022, 8:26 IST
Last Updated 29 ಆಗಸ್ಟ್ 2022, 8:26 IST
ಗುಲಾಂ ನಬಿ ಆಜಾದ್‌
ಗುಲಾಂ ನಬಿ ಆಜಾದ್‌   

ನವದೆಹಲಿ: ಕೆಲದಿಗಳ ಹಿಂದಷ್ಟೇ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್‌ ಅವರುಪಕ್ಷ ತೊರೆದದ್ದು ಏಕೆ ಎಂದು ಸ್ಪಷ್ಟನೆ ನೀಡಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಗುಲಾಂ ನಬಿ,ಕಾಂಗ್ರೆಸ್‌ ಪಕ್ಷವನ್ನು ತಮ್ಮ 'ಮನೆ' ಎಂದು ಹೇಳಿಕೊಂಡಿದ್ದಾರೆ. 'ನನ್ನ ಮನೆಯನ್ನೇ ನಾನು ತೊರೆಯಬೇಕಾದ ಒತ್ತಡದ ಪರಿಸ್ಥಿತಿ ಸೃಷ್ಟಿಯಾಯಿತು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದಲ್ಲಿನ ನಾಯಕತ್ವ ಸುಧಾರಣೆ ಕುರಿತಂತೆಕಾಂಗ್ರೆಸ್‌ನ ಭಿನ್ನಮತೀಯ ಗುಂಪು 'ಜಿ–23'ರ ಮುಖಂಡರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಅದಾದ ಬಳಿಕ ತಮ್ಮ ಹಾಗೂ ಕಾಂಗ್ರೆಸ್‌ ನಡುವೆ ಸಮಸ್ಯೆ ಸೃಷ್ಟಿಯಾಯಿತು. ಇದರಿಂದಾಗಿ ಕಾಂಗ್ರೆಸ್‌ ತೊರೆಯುವಂತಹ ಒತ್ತಡದ ಸ್ಥಿತಿ ನಿರ್ಮಾಣವಾಯಿತು ಎಂದು ಕಿಡಿಕಾರಿದ್ದಾರೆ.

ADVERTISEMENT

'ಯಾರೊಬ್ಬರೂ ತಮ್ಮನ್ನು ಪ್ರಶ್ನಿಸಬಾರದು. ತಮಗೆ ಪತ್ರ ಬರೆಯಬಾರದು ಎಂಬುದು ಪಕ್ಷದ ಉನ್ನತ ನಾಯಕರ ಬಯಕೆ. ಕಾಂಗ್ರೆಸ್‌ನಲ್ಲಿ ಹಲವು ಸಭೆಗಳು ನಡೆದಿವೆ. ಆದರೆ, ಸಭೆಗಳಲ್ಲಿ ನೀಡಲಾದ ಒಂದೇ ಒಂದು ಸಲಹೆಯನ್ನೂ ಪರಿಗಣಿಸಲಾಗಿಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಗುಲಾಂ ನಬಿ ಆಜಾದ್‌ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ ಎಲ್ಲ ಹುದ್ದೆಗಳಿಗೆ ಆಗಸ್ಟ್‌ 26 ರಂದು (ಶುಕ್ರವಾರ) ರಾಜೀನಾಮೆ ನೀಡಿದ್ದರು.

ಸೋನಿಯಾ ಗಾಂಧಿ ಅವರಿಗೆ ರಾಜೀನಾಮೆ ಪತ್ರ ರವಾನಿಸಿದ್ದ ಅವರು, ರಾಹುಲ್ ಗಾಂಧಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು. ರಾಹುಲ್‌ ಅವರ ಅಪ್ರಬುದ್ಧತೆ ಮತ್ತು ಬಾಲಿಶ ಕ್ರಮಗಳು ಕಾಂಗ್ರೆಸ್‌ ಅನ್ನು ಸಂಪೂರ್ಣ ನಾಶ ಮಾಡಿವೆ ಎಂದು ಅವರು ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.