ADVERTISEMENT

ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಿ ಪೋಸ್ಟರ್: ವಿಡಿಯೊ ಮಾಡಿ ಕ್ಷಮೆ ಕೇಳಿದ ಯುವತಿ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 9:35 IST
Last Updated 7 ಜನವರಿ 2020, 9:35 IST
ಮೆಹಕ್ ಮಿರ್ಜಾ ಪ್ರಭು (ಫೋಟೊ: ಫೇಸ್‌ಬುಕ್ ಪುಟದಿಂದ)
ಮೆಹಕ್ ಮಿರ್ಜಾ ಪ್ರಭು (ಫೋಟೊ: ಫೇಸ್‌ಬುಕ್ ಪುಟದಿಂದ)   

ಮುಂಬೈ: ಜೆಎನ್‌ಯುನಲ್ಲಿ ಭಾನುವಾರ ನಡೆದ ಹಿಂಸಾಚಾರ ವಿರೋಧಿಸಿ ಮುಂಬೈನ ಗೇಟ್‌ವೇ ಆಫ್ ಇಂಡಿಯಾ ಆವರಣದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ'ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡಿ' ಎಂಬ ಪೋಸ್ಟರ್ ಪ್ರದರ್ಶನ ವೈರಲ್ ಆಗಿತ್ತು. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ ಬೆನ್ನಲ್ಲೇ ಪೋಸ್ಟರ್ ಹಿಡಿದಿದ್ದ ಯುವತಿ ಫೇಸ್‌ಬುಕ್‌ನಲ್ಲಿ ವಿಡಿಯೋ ಶೇರ್ ಮಾಡಿ, ಇದರ ಹಿಂದೆ ಯಾವುದೇ ಉದ್ದೇಶವಿಲ್ಲ ಎಂದು ಕ್ಷಮೆ ಕೇಳಿದ್ದಾರೆ.

ಮುಂಬೈ ಮೂಲದ ಕಥೆಗಾರ್ತಿ ಮೆಹಕ್ ಮಿರ್ಜಾ ಪ್ರಭು, ನಾನು ಹಿಡಿದಿದ್ದ ಪೋಸ್ಟರ್‌ಅನ್ನು ತಪ್ಪಾಗಿ ಅರ್ಥೈಸಲಾಗಿದೆ. ಕಾಶ್ಮೀರಿಗಳ ಹಕ್ಕುಗಳ ಬಗ್ಗೆ ಮಾತ್ರ ನಾನು ಮಾತನಾಡಿದ್ದೆ. ನಾನು ಮುಂಬೈನ ಲೇಖಕಿ ಮೆಹಕ್. ನೆನ್ನೆಯಿಂದ ಜನರಿಂದ ಹುಚ್ಚುತನದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದೇನೆ.ಪರಿಸ್ಥಿತಿಯ ಬಗ್ಗೆ ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದಿದ್ದಾರೆ.

ಸಿಎಎ, ಎನ್‌ಆರ್‌ಸಿ ಮತ್ತು ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿ ಸೇರಿದಂತೆ ಹಲವು ವಿಚಾರಗಳ ಪೋಸ್ಟರ್‌ಗಳನ್ನು ನಾನು ನೋಡಿದೆ. ನಾನು ಫ್ರೀ ಕಾಶ್ಮೀರ ಎಂಬ ಪೋಸ್ಟರ್ ಹಿಡಿದು ಬಂದೆ. ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ನಾನು ಕಾಶ್ಮೀರಿಯವಳಲ್ಲ. ನನಗೆ ಕಾಶ್ಮೀರಿಗಳ ಸಂವಿಧಾನದ ಹಕ್ಕುಗಳ ಬಗ್ಗೆ ಹೊಳೆಯಿತು. ಆದರೆ ಅದನ್ನು ಬೇರೆ ರೀತಿಯಲ್ಲೇ ನೋಡಲಾಯಿತು. ಈ ಪರಿಸ್ಥಿತಿಯು ನನ್ನಂತ ಮಹಿಳೆಯರಿಗೆ ಭಯ ಹುಟ್ಟಿಸಿದೆ. ಈ ರೀತಿಯ ಭಯದಲ್ಲಿ ನಾವು ಬದುಕಬಾರದು ಎಂದು ತಿಳಿಸಿದ್ದಾರೆ.

ADVERTISEMENT

ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಉಂಟು ಮಾಡಿರುವ ಗದ್ದಲದ ಬಗ್ಗೆ ನನಗೆ ಆಘಾತವಾಗಿದೆ. ಪೋಸ್ಟರ್ ಎಂದರೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಇರುವ ಸ್ವಾತಂತ್ರ್ಯ. ಕಾಶ್ಮೀರದಲ್ಲಿನ ಇಂಟರ್‌ನೆಟ್ ಸ್ಥಗಿತದ ಬಗ್ಗೆ ಹಲವು ವ್ಯಕ್ತಿಗಳು ಧ್ವನಿ ಎತ್ತಿದ್ದಾರೆ. ನಾನು ಕೂಡ ಅಲ್ಲಿನ ಮೂಲಭೂತ ಹಕ್ಕಿನ ಬಗ್ಗೆ ಧ್ವನಿ ಎತ್ತಿ ಅಂತರ್ಜಾಲ ಸ್ಥಗಿತದಿಂದ ಮುಕ್ತಗೊಳಿಸಬೇಕು ಎಂದು ಹೇಳಿದ್ದೆ. ಅದರ ಹಿಂದೆ ಬೇರೆ ಯಾವುದೇ ಉದ್ದೇಶ ಅಥವಾ ಅಜೆಂಡಾಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಈ ರೀತಿಯ ಪರಿಣಾಮವನ್ನು ಉಂಟುಮಾಡುತ್ತದೆ ಎಂಬುದನ್ನು ಅರಿಯಲು ನನಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಕ್ಷಮೆ ಕೇಳುತ್ತೇನೆ. ಮಾನವನ ಬಗ್ಗೆ ಕಾಳಜಿಯನ್ನು ಹೊಂದಿರುವ ನಾನು ಕಲೆಗಾರ್ತಿ. ದ್ವೇಷದಿಂದ ಹೊರಬರಲು ದಯಮಾಡಿ ಪ್ರೀತಿಯೆಂಬ ಶಕ್ತಿಯನ್ನು ಹಂಚಿ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.