ಬೆಂಗಳೂರು, ಚೆನ್ನೈ, ಹೈದರಾಬಾದ್, ದೆಹಲಿ ಸೇರಿದಂತೆ ದೇಶದ 21 ನಗರಗಳು 2020ರ ವೇಳೆಗೆ ಅಂತರ್ಜಲದ ತೀವ್ರ ಕೊರತೆಯನ್ನು ಎದುರಿಸಲಿವೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಇದು ಸುಮಾರು 10 ಕೋಟಿ ಜನರ ಮೇಲೆ ಪರಿಣಾಮ ಬೀರಲಿದೆ.
ಮಹಾ ವಿಧಾನಸಭೆಯಲ್ಲಿ ನೀರಿನ ಗದ್ದಲ
ಮಹಾರಾಷ್ಟ್ರ ವಿಧಾನಸಭಾ ಕಲಾಪದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕರಣವಾಗಿದ್ದು ನೀರಿನ ಸಮಸ್ಯೆ.ಮರಾಠವಾಡ ಪ್ರದೇಶದ ಜಿಲ್ಲೆಗಳು ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿವೆ ಎಂಬವಿರೋಧ ಪಕ್ಷಗಳ ಆರೋಪವನ್ನು ಸರ್ಕಾರ ನಿರಾಕರಿಸಿತು.
‘ರಾಜ್ಯದಲ್ಲಿ ಇರುವ ನೀರಿನ ಸಂಗ್ರಹ ಶೇ 1ರಷ್ಟು ಮಾತ್ರ. ಹೀಗಿದ್ದರೂ ಸರ್ಕಾರ ಎಚ್ಚರ ವಹಿಸುತ್ತಿಲ್ಲ. ರಾಷ್ಟ್ರೀಯ ಥರ್ಮಲ್ ವಿದ್ಯುತ್ ನಿಗಮ(ಎನ್‌ಟಿಪಿಸಿ) ಮತ್ತು ಮಹಾರಾಷ್ಟ್ರ ಸರ್ಕಾರಗಳ ಒಪ್ಪಂದದಂತೆಕುಡಿಯುವ ನೀರನ್ನು ಉಜನಿ ಜಲಾಶಯದಿಂದ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಪೂರೈಸಲಾಗುತ್ತಿದೆಎಂದು ವಿರೋಧ ಪಕ್ಷಗಳು ಆರೋಪಿಸಿದವು.
ಜಲಾಗಾರಗಳಲ್ಲಿ ನೀರಿಲ್ಲ
ದೇಶದ ಪ್ರಮುಖ 91 ಜಲಾಶಯಗಳಲ್ಲಿ ಶೇ 18ರಷ್ಟು ಮಾತ್ರ ನೀರಿದೆ ಎಂದು ಒಂದು ವಾರದ ಹಿಂದೆ ಕೇಂದ್ರ ಜಲಸಂಪನ್ಮೂಲ ಸಚಿವಾಲಯ ಮಾಹಿತಿ ನೀಡಿತ್ತು. ಇವುಗಳ ಒಟ್ಟು ಸಂಗ್ರಹ ಸಾಮರ್ಥ್ಯ 16,100 ಕೋಟಿ ಘನ ಮೀಟರ್. ಈ ಪೈಕಿ ಲಭ್ಯವಿರುವುದು 2,900 ಕೋಟಿ ಘನ ಮೀಟರ್ ಮಾತ್ರ ಎಂಬುದು ಆತಂಕಕಾರಿ. ದಕ್ಷಿಣ ಭಾರತದ ಜಲಾಯಶಗಳಲ್ಲಿ ಸದ್ಯ ಇರುವ ನೀರಿನ ಸಂಗ್ರಹ 500 ಕೋಟಿ ಘನ ಮೀಟರ್ ಮಾತ್ರ. ಇದು ಒಟ್ಟು ಸಾಮರ್ಥ್ಯದ ಶೇ 11 ಮಾತ್ರ. ಕಳೆದ ವರ್ಷಕ್ಕೆ ಹೋಲಿಸಿದರೆ ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಈ ಬಾರಿ ಕಡಿಮೆಯಿದೆ.
ಚೆನ್ನೈನಲ್ಲಿ ನೀರಿನ ಬವಣೆ
ಚೆನ್ನೈನ 3 ನದಿಗಳು, 4 ಜಲಾಶಯಗಳು, 5 ಜೌಗು ಪ್ರದೇಶಗಳು ಬತ್ತಿಹೋಗಿದ್ದು, 6 ಅರಣ್ಯಗಳು ಒಣಗಿವೆ. ಸರಿಸುಮಾರು ಒಂದು ಕೋಟಿ ಜನಸಂಖ್ಯೆ ಹೊಂದಿರುವ ಚೆನ್ನೈನಲ್ಲಿ ನೀರಿನ ಸಮಸ್ಯೆ ಗರಿಷ್ಠ ಹಂತಕ್ಕೆ ತಲುಪಿದೆ. ನೀರಿನ ಟ್ಯಾಂಕರ್‌ಗಾಗಿ ಸಾಲುಗಟ್ಟಿ ನಿಂತಿರುವ ಜನ, ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ ಶಿಕ್ಷಣ ಸಂಸ್ಥೆಗಳು, ಕಚೇರಿಗೆ ಬರುವ ಬದಲು ಮನೆಯಿಂದಲೇ ಕೆಲಸ ಮಾಡಿ ಎಂದು ಸಿಬ್ಬಂದಿಗೆ ಸೂಚಿಸುತ್ತಿರುವ ಕಚೇರಿಗಳು – ಚೆನ್ನೈನ ಜಲಕ್ಷಾಮಕ್ಕೆ ಕೆಲವು ಉದಾಹರಣೆಗಳು ಮಾತ್ರ.
ಕಳೆದ ವರ್ಷ ಮುಂಗಾರು ಕೈಕೊಟ್ಟಿದ್ದರಿಂದ ಜಲ ಮೂಲಗಳು ತುಂಬಿರ ಲಿಲ್ಲ. ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಪರಿಸ್ಥಿತಿ ತೀರಾ ಕೆಟ್ಟದಾಗಿದ್ದು ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಟ್ಯಾಂಕರ್ ಮಾಲೀಕರು ಜನರನ್ನು ಸತಾಯಿಸುತ್ತಿದ್ದು, ದುಬಾರಿ ಹಣ ತೆತ್ತರೂ ಸಹ ಬುಕ್ ಮಾಡಿದ 8 ದಿನಗಳ ಬಳಿಕ ನೀರು ಪೂರೈಸುತ್ತಿದ್ದಾರೆ.
ಚೆನ್ನೈಗೆ ನೀರು ಪೂರೈಸುವ ಪೂಂದಿ, ಚೆಂಬರಂಬಾಕ್ಕಂ, ಶೋಲಾವರಂ ಹಾಗೂ ರೆಡ್ ಹಿಲ್ಸ್ ಜಲಾಶಯಗಳು ಬರಿದಾಗಿವೆ. ಚೆನ್ನೈನಲ್ಲಿನ ಪ್ರತಿಷ್ಠಿತ ಕಂಪನಿಗಳೂ ನೀರು ಉಳಿತಾಯಕ್ಕೆ ಮುಂದಾಗಿವೆ. ಫಿಯಟ್, ಟಿಸಿಎಸ್, ವಿಪ್ರೊ, ಕಾಗ್ನಿಜಂಟ್ ಮೊದಲಾದ ಕಂಪನಿಗಳು ಕ್ಯಾಂಟೀನ್, ಶೌಚಾಲಯಗಳಲ್ಲಿ ಅತಿ ಕಡಿಮೆ ನೀರು ಬಳಸಲು ನಿರ್ಧರಿಸಿವೆ.
ಕೊಠಡಿಗಳನ್ನು ಖಾಲಿ ಮಾಡುವಂತೆ ವಸತಿಗೃಹಗಳ ಮಾಲೀಕರು ಗ್ರಾಹಕರಿಗೆ ಸೂಚಿಸಿದ್ದಾರೆ.
ಶಾಲೆಗೆ ಬರಬೇಡಿ ಎಂದು ಇ–ಮೇಲ್
ನೀರಿನ ಅಭಾವದ ಕಾರಣ ಚೆನ್ನೈನ ಖಾಸಗಿ ಶಾಲೆಗಳ ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಜೂನ್ 19ರಂದು ಒಂದು ವಾರ ರಜೆ ಘೋಷಿಸಲಾಗಿತ್ತು. ಖಾಸಗಿ ಶಾಲೆಗಳಿಗೆ ನೀರು ಪೂರೈಸುವುದು ಸರ್ಕಾರದ ಕೆಲಸವಲ್ಲ ಎಂದು ತಮಿಳುನಾಡ ಶಿಕ್ಷಣ ಸಚಿವರು ಸ್ಪಷ್ಟವಾಗಿ ಹೇಳಿದ್ದರು.
ಮರಾಠವಾಡಾ ಈಗ ಟ್ಯಾಂಕರ್‌ವಾಡಾ
* ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅವರ ಮನೆಯ ಕೆಲಸದವರು ಪೈಪ್ ಹಚ್ಚಿ ಕಾರು ತೊಳೆದದ್ದಕ್ಕಾಗಿ ಗುರುಗ್ರಾಮ ನಗರಾಡಳಿತವು ಅವರಿಗೆ ಇತ್ತೀಚೆಗೆ ₹500 ದಂಡ ವಿಧಿಸಿತ್ತು. ನೀರಿನ ಅಭಾವವನ್ನು ಈ ಪ್ರಕರಣ ಸಾಂಕೇತಿಕವಾಗಿ ತೋರುತ್ತದೆ.
* ಮರಾಠವಾಡಾದ ಬಹುತೇಕ ಜನರು ಟ್ಯಾಂಕರ್ ನೀರನ್ನು ಅವಲಂಬಿಸಿದ್ದಾರೆ. ಹೀಗಾಗಿ ಈ ಪ್ರದೇಶಕ್ಕೆ ‘ಟ್ಯಾಂಕರ್‌ವಾಡಾ’ ಎಂಬ ಅಡ್ಡಹೆಸರೂ ಬಂದುಬಿಟ್ಟಿದೆ.
* ಸರಿಯಾಗಿ ನೀರು ಪೂರೈಸುತ್ತಿಲ್ಲ ಎಂದು ಆರೋಪಿಸಿ, ಕೊಯಮತ್ತೂರು ಜಿಲ್ಲಾಡಳಿತದ ಕಚೇರಿಗೆ ಖಾಲಿ ಕೊಡಗಳೊಂದಿಗೆ ಮುತ್ತಿಗೆ ಹಾಕಿದ 550 ಜನರನ್ನು ಬುಧವಾರ ಬಂಧಿಸಲಾಗಿತ್ತು.
* ನೀರಿನ ಸಮಸ್ಯೆಯ ಕಾರಣ ಮಹಾರಾಷ್ಟ್ರ, ತಮಿಳುನಾಡಿನ ಕೆಲವು ಶಾಲೆಗಳಿಗೆ ನೀಡಿದ್ದ ರಜೆಯನ್ನು ಒಂದು ವಾರ ವಿಸ್ತರಿಸಲಾಗಿತ್ತು.
* ನೀರಿಗಾಗಿ ಹಿಂಸಾಚಾರ ನಡೆದ ಕಾರಣ ಮಧ್ಯಪ್ರದೇಶದ 52 ನೀರಿನ ಮೂಲಗಳಿಗೆ ಭದ್ರತೆ ನೀಡುವಂತೆ ಸರ್ಕಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇತ್ತೀಚೆಗೆ ಸೂಚಿಸಿತ್ತು.
* ನೀತಿ ಆಯೋಗದ ವರದಿಯ ಪ್ರಕಾರ, ಭಾರತವು ಜಗತ್ತಿನಲ್ಲಿಯೇ ಅಂತರ್ಜಲವನ್ನು ಅತಿಹೆಚ್ಚು ಹೊರತೆಗೆಯುತ್ತಿರುವ ದೇಶವಾಗಿದೆ.
* ಭೂಮಿಯ ಶುದ್ಧನೀರಿನ ಪೈಕಿ ಭಾರತದಲ್ಲಿರುವ ನೀರಿನ ಪ್ರಮಾಣ4% ಮಾತ್ರ. ಆದರೆ16%ಜನಸಂಖ್ಯೆಗೆ ಈ ನೀರು ಹಂಚಿಕೆಯಾಗುತ್ತಿದೆ.
**
‘ದಕ್ಷಿಣ ಭಾರತದ ಫುಲ್‌ಮೀಲ್ಸ್’ ರದ್ದು ಮಾಡಲು ಕೆಲ ಹೋಟೆಲ್‌ಗಳು ನಿರ್ಧರಿಸಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮುಂದಿನ ದಿನಗಳಲ್ಲಿ ಶೇ 50ರಷ್ಟು ಹೋಟೆಲ್‌ಗಳು ಬಾಗಿಲು ಮುಚ್ಚಲಿವೆ.
-ರವಿ, ಚೆನ್ನೈ ಹೋಟೆಲ್ ಸಂಘಟನೆ ಅಧ್ಯಕ್ಷ
**
ನಾವು ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಏನನ್ನು ಬಿಟ್ಟು ಹೋಗುತ್ತೇವೆ. ನೀರಿನ ಬದಲಾಗಿ ಹಣವನ್ನು ಕುಡಿಯಿರಿ ಎನ್ನಲು ಸಾಧ್ಯವೇ? ಸಮುದ್ರದ ನೀರನ್ನು ಶುದ್ಧೀಕರಿಸಿ ಬಳಸುವ ಮಾರ್ಗ ದುಬಾರಿ ಹಾಗೂ ಶಾಶ್ವತ ಪರಿಹಾರವೇನೂ ಅಲ್ಲ. ನೀರು ಉಳಿಸುವುದು, ಅಂರ್ಜಲವನ್ನು ಹೆಚ್ಚಿಸುವುದು ಸರ್ಕಾರ ಹಾಗೂ ಜನರ ಸಾಮೂಹಿಕ ಜವಾಬ್ದಾರಿ.
-ಮನೋಹರ್ ಕುಶಲಾನಿ, ರಾಷ್ಟ್ರೀಯ ಜಲ ಅಕಾಡೆಮಿಯ ಮಾಜಿ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.