ವಯನಾಡಿನಲ್ಲಿ ಕಳೆದ ವರ್ಷ ಸಂಭವಿಸಿದ ಭೂಕುಸಿತದ ಸಂಗ್ರಹ ಚಿತ್ರ
ಪಿಟಿಐ
ತಿರುವನಂತಪುರ: ಕೇರಳದ ವಯನಾಡಿನಲ್ಲಿ ಕಳೆದ ವರ್ಷದ ಜುಲೈನಲ್ಲಿ ಸಂಭವಿಸಿದ ಭಾರಿ ಭೂಕುಸಿದಿಂದಾಗಿ ಹಚ್ಚ ಹಸಿರಿನಿಂದ ಕೂಡಿದ್ದ ತಾಣ ಸ್ಮಶಾನವಾಗಿ ಮಾರ್ಪಟ್ಟಿತ್ತು. ಕುಟುಂಬ ಸದಸ್ಯರನ್ನು ಕಳೆದುಕೊಂಡು ನೆಲೆ ಇಲ್ಲದೇ ಜೀವನ ಸಾಗಿಸುತ್ತಿದ್ದ ಜನರಿಗೆ ಇದೀಗ ರಾಜ್ಯ ಸರ್ಕಾರ ಹೊಸ ಮನೆಗಳನ್ನು ಹಸ್ತಾಂತರಿಸಲಿದೆ.
'ಭೂಕುಸಿತದಿಂದ ನಲುಗಿದ್ದ ಸಂತ್ರಸ್ತರಿಗೆ ಹೊಸ ಮನೆಗಳನ್ನು ಒದಗಿಸುವ ನಿಟ್ಟಿನಲ್ಲಿ ಟೌನ್‌ಶಿಪ್ ನಿರ್ಮಾಣ ಕಾರ್ಯ ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷದ ಜನವರಿಯೊಳಗೆ ಮನೆಗಳನ್ನು ಹಸ್ತಾಂತರಿಸುವ ಗುರಿ ಹೊಂದಿದ್ದೇವೆ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ.
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು 402 ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಿದೆ. ಟೌನ್‌ಶಿಪ್‌ನ ಹೊರ ಭಾಗದಲ್ಲಿ ವಾಸಿಸಲು ಇಚ್ಛಿಸಿದ 104 ಜನರಿಗೆ ತಲಾ ₹15 ಲಕ್ಷ ನೀಡಲಾಗಿದೆ. 295 ಫಲಾನುಭವಿಗಳು ಟೌನ್‌ಶಿಪ್‌ನಲ್ಲಿ ಹೊಸ ಮನೆಗಳಿಗೆ ಸ್ಥಳಾಂತರಗೊಳ್ಳಲು ಒಪ್ಪಿಗೆ ನೀಡಿದ್ದಾರೆ ಎಂದು ವಿಜಯನ್ ತಿಳಿಸಿದ್ದಾರೆ.
ಪರಿಶೀಲನೆಯ ನಂತರ ಮೇಲ್ಮನವಿ ಅರ್ಜಿಗಳ ಆಧಾರದ ಮೇಲೆ ಪುನರ್ವಸತಿ ಪಟ್ಟಿಗೆ ಇನ್ನೂ 49 ಜನರನ್ನು ಸೇರಿಸಲಾಗಿದೆ. ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯನ್ನು ವಯನಾಡಿನ ಪುನರ್ವಸತಿಗೆ ಬಳಸಲಾಗಿಲ್ಲ ಎಂಬ ಆರೋಪಕ್ಕೆ ಸದನದಲ್ಲಿ ಪ್ರತಿಕ್ರಿಯಿಸಿದ ವಿಜಯನ್, ಅಂತಹ ಹೇಳಿಕೆಗಳ ಬಗ್ಗೆ ನನಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದರು.
ಕಳೆದ ವರ್ಷ ಜುಲೈ 30ರಂದು ವಯನಾಡಿನ ಮುಂಡಕ್ಕೈ ಮತ್ತು ಚೂರಲ್‌ಮಲ ಪ್ರದೇಶಗಳಲ್ಲಿ ಸಂಭವಿಸಿದ ಭೂಕುಸಿತದಲ್ಲಿ 222ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.