ಹುಲಿ (ಪ್ರಾತಿನಿಧಿಕ ಚಿತ್ರ)
ವಯನಾಡ್, ಕೇರಳ: ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ 47 ವರ್ಷದ ಕಾರ್ಮಿಕ ಮಹಿಳೆಯನ್ನು ಕೊಂದ ಹುಲಿಯನ್ನು ಕೂಡಲೇ ಹತ್ಯೆ ಮಾಡಬೇಕು ಎಂದು ಆಗ್ರಹಿಸಿ ಸ್ಥಳೀಯರು ಮಾನಂದವಾಡಿ ಅರಣ್ಯ ಇಲಾಖೆ ಕಚೇರಿ ಎದುರು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಪ್ರಿಯದರ್ಶಿನಿ ಎಸ್ಟೇಟ್‌ನಲ್ಲಿ ಕಾಫಿ ಬೀಜ ಕೊಯ್ಯುತ್ತಿದ್ದ ಪರಿಶಿಷ್ಟ ಜಾತಿಯ ಮಹಿಳೆ ರಾಧಾ ಮೇಲೆ ಶುಕ್ರವಾರ ಬೆಳಿಗ್ಗೆ ಹುಲಿ ದಾಳಿ ನಡೆಸಿ ಕೊಂದುಹಾಕಿತ್ತು. ಅವರ ಮೃತದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಿ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಇದಾದ ಸ್ಪಲ್ಪ ಹೊತ್ತಿನಲ್ಲೇ ಅರಣ್ಯ ಕಚೇರಿ ಮುಂದೆ ಜಮಾಯಿಸಿದ್ದ ಸ್ಥಳೀಯರು ಹುಲಿಯನ್ನು ಕೊಂದು ಹಾಕಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದರು.
‘ಕಾನೂನಿನ ಅನ್ವಯವೇ ಹುಲಿಯನ್ನು ಬಂಧಿಸಲು ಬೋನು ಅಳವಡಿಸಲಾಗಿದೆ. ಅದರಲ್ಲಿ ಬೀಳದಿದ್ದರೆ, ರಾಷ್ಟ್ರೀಯ ಹುಲಿ ಪ್ರಾಧಿಕಾರ ಪ್ರಕಟಿಸಿರುವ ಪ್ರಮಾಣಿತ ಕಾರ್ಯಾಚರಣೆ ಮೂಲಕ ಅದನ್ನು ಹತ್ಯೆ ಮಾಡಲು ವನ್ಯಜೀವಿ ವಿಭಾಗದ ಮುಖ್ಯ ವಾರ್ಡನ್ ಪ್ರಮೋದ್ ಜಿ.ಕೃಷ್ಣನ್ ಆದೇಶ ಹೊರಡಿಸಿದ್ದಾರೆ’ ಎಂದು ಸ್ಥಳೀಯ ಅರಣ್ಯ ಇಲಾಖೆಯ ಅಧಿಕಾರಿಗಳು ಭರವಸೆ ನೀಡಿದರು.
ಅಧಿಕಾರಿಗಳ ಉತ್ತರಕ್ಕೆ ತೃಪ್ತರಾಗದ ಜನರು ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆಗೆ ಕಾಂಗ್ರೆಸ್ ಪಕ್ಷ ಬೆಂಬಲ ನೀಡಿದ್ದರಿಂದ, ಮಾನಂದವಾಡಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
‘ರಾಜ್ಯ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದ ಮಾನವ–ವನ್ಯಜೀವಿಗಳ ನಡುವಿನ ಸಂಘರ್ಷವು ರಾಜ್ಯದಲ್ಲಿ ಗಣನೀಯವಾಗಿ ತಗ್ಗಿದೆ’ ಎಂದು ಅರಣ್ಯ ಸಚಿವ ಎ.ಕೆ. ಶಶೀಂದ್ರನ್ ನೀಡಿದ ಹೇಳಿಕೆ ಬೆನ್ನಲ್ಲೇ, ಈ ಬೆಳವಣಿಗೆ ನಡೆದಿದೆ.
ಚಿರತೆ ಬಂಧನ: (ಕೋಯಿಕ್ಕೋಡ್) ಜಿಲ್ಲೆಯ ಕೂಡಾರಂಜಿ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆಹಿಡಿಯುವಲ್ಲಿ ಇಲ್ಲಿನ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಜನವಸತಿ ಪ್ರದೇಶಕ್ಕೆ ಬಂದ ಸಂದರ್ಭದಲ್ಲಿ ಮೂರು ವರ್ಷದ ಚಿರತೆ ಬೋನಿಗೆ ಬಿದ್ದಿದೆ. ಹಲವು ದಿನಗಳಿಂದ ಹತ್ತಾರು ಸಾಕುಪ್ರಾಣಿಗಳನ್ನು ಕೊಂದು ಹಾಕಿದ್ದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಆನೆ ದಾಳಿ–ರೈತನಿಗೆ ಗಾಯ
ಪಾಲಕ್ಕಾಡ್: ಇಲ್ಲಿನ ವಲಯಾರ್ ಜನವಸತಿ ಪ್ರದೇಶಕ್ಕೆ ಕಾಡಾನೆ ನುಗ್ಗಿ ದಾಳಿ ನಡೆಸಿದ್ದರಿಂದ 35 ವರ್ಷದ ರೈತರೊಬ್ಬರು ಗಾಯಗೊಂಡಿದ್ದಾರೆ. ‘ಶನಿವಾರ ಬೆಳಿಗ್ಗೆ ಊರಿಗೆ ನುಗ್ಗಿದ ಆನೆ ಗಮನಿಸಿ ಜನರು ಓಡಿದ್ದಾರೆ. ಈ ವೇಳೆ ವಿಜಯನ್ ಅವರಿಗೆ ಗಾಯವಾಗಿದ್ದು ತ್ರಿಶೂರಿನ ಆಸ್ಪತ್ರೆಗೆ ದಾಖಲಿಸಿದ್ದು ಅವರ ಸ್ಥಿತಿ ಸ್ಥಿರವಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.