ADVERTISEMENT

ಕೊರೊನಾ | ಮೇ 3ರ ವರೆಗೂ ದೇಶದಾದ್ಯಂತ ಲಾಕ್‌ಡೌನ್‌ ಮುಂದುವರಿಕೆ: ಮೋದಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 10:52 IST
Last Updated 14 ಏಪ್ರಿಲ್ 2020, 10:52 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ    

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಬಹುಬೇಗನೇ ಕೈಗೊಳ್ಳಲಾದ ಲಾಕ್‌ಡೌನ್‌ನಂತಹ ಕ್ರಮಗಳಿಂದ ಭಾರತ ದೇಶ ಜಗತ್ತಿನ ಇತರೆ ಬಲಾಢ್ಯ ರಾಷ್ಟ್ರಗಳಿಗಿಂತಲೂ ಉತ್ತಮ ಸ್ಥಿತಿಯಲ್ಲಿದೆ. ನಿಮ್ಮೆಲ್ಲರ ಸಹಕಾರದಿಂದ ಕೊರೊನಾ ಸೋಂಕು ಒಂದಿಷ್ಟು ಮಟ್ಟಿಗೆ ನಿಯಂತ್ರಣಕ್ಕೆ ತರಲು ಅನುಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

'ಸೋಂಕು ಪ್ರಕರಣಗಳು 550 ದಾಖಲಾಗಿದ್ದಾಗಲೇ ದೇಶದಾದ್ಯಂತ 21 ದಿನಗಳ ಲಾಕ್‌ಡೌನ್ ಘೋಷಿಸಲಾಯಿತು. ಇದು ಭಾರಿ ಪ್ರಮಾಣದಲ್ಲಿ ಕೊರೊನಾ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿತು. ಬೇರೆ ದೇಶಗಳಲ್ಲಿನ ಹಾನಿ ಗಮನಿಸಿದರೆ ಭಾರತವು ಉತ್ತಮ ಸ್ಥಿತಿಯಲ್ಲಿದೆ. ಬೇರೆ ದೇಶಗಳಲ್ಲಿ ಸೋಂಕು ಪರಿಣಾಮ‌ 25-30 ಪಟ್ಟು ಅಧಿಕವಾಗಿದೆ. ಸಕಾಲಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳದೇ ಹೋಗಿದ್ದರೆ ನಾವು ಈ ಸ್ಥಿತಿಯಲ್ಲಿರುವುದು ಸಾಧ್ಯವಾಗುತ್ತಿರಲಿಲ್ಲ' ಎಂದರು.

ADVERTISEMENT

ಏಪ್ರಿಲ್‌ 14ರಂದು ದೇಶದಾದ್ಯಂತ 21 ದಿನಗಳ ಲಾಕ್‌ಡೌನ್‌ ಕೊನೆಯಾಗುತ್ತಿತ್ತು. ದೇಶದಲ್ಲಿ ಕೋವಿಡ್‌–19 ದೃಢಪಟ್ಟಿರುವ ಒಟ್ಟು ಪ್ರಕರಣಗಳ ಸಂಖ್ಯೆ 10,000 ದಾಟಿದ್ದು, ಸೋಂಕಿನಿಂದ 339 ಮಂದಿ ಸಾವಿಗೀಡಾಗಿರುವುದಾಗಿ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಿಂದ ತಿಳಿದುಬಂದಿದೆ. ಹೊಸ ಪ್ರದೇಶಗಳಿಗೆ ಸೋಂಕು ಹರಡುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಮೇ 3ರ ವರೆಗೂ ಲಾಕ್‌ಡೌನ್‌ ವಿಸ್ತರಿಸಲಾಗಿದೆ. ಈ ಮೂಲಕ ದೇಶ ಒಟ್ಟು 40 ದಿನಗಳ ಲಾಕ್‌ಡೌನ್‌ಗೆ ಒಳಗಾದಂತಾಗಲಿದೆ. ಈಗಾಗಲೇ ಇರುವ 600ಕ್ಕೂ ಹೆಚ್ಚು ಕೋವಿಡ್ ಆಸ್ಪತ್ರೆಗಳ ಸೌಕರ್ಯವನ್ನು ಮತ್ತಷ್ಟು ವಿಸ್ತರಿಸಲಾಗುತ್ತದೆ.

ಮಂಗಳವಾರ ಬೆಳಿಗ್ಗೆ 10ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜ್ಯ ಸರ್ಕಾರಗಳು, ಸ್ಥಳೀಯಾಡಳಿತಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿವೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮೂಹಿಕ ಶಕ್ತಿಯ ಪ್ರದರ್ಶನದ ಸಂಕಲ್ಪವೇ ಬಾಬಾ ಸಾಹೇಬರಿಗೆ ಅರ್ಪಿಸುವ ನಿಜವಾದ ಶ್ರದ್ಧಾಂಜಲಿ. ಉತ್ಸವದಿಂದ ಭಾರತ ತುಂಬಿದೆ, ಸದಾ ಹಸಿರಾಗಿದೆ. ವಿಷು, ಬೈಸಾಖಿ ಮುಂತಾದ ಹೊಸ ವರ್ಷದ ದಿನ ಇಂದು. ಆರೋಗ್ಯಕ್ಕಾಗಿ ಪ್ರಾರ್ಥಿಸಿ ನಿಮಗೆಲ್ಲರಿಗೂ ಮಂಗಳ ಕಾಮನೆಗಳು ಎಂದರು.

ನಾಳೆ (ಏಪ್ರಿಲ್‌ 15) ಸರ್ಕಾರವು ಲಾಕ್‌ಡೌನ್‌ ಮುಂದುವರಿಕೆ ಸಂಬಂಧಿಸಿದ ವಿಸ್ತೃತ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಿದೆ. ಏಪ್ರಿಲ್‌ 20ರ ನಂತರ ಸುಧಾರಿಸಿಕೊಂಡಿರುವ ಪ್ರದೇಶಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗುತ್ತದೆ.

ಇನ್ನಷ್ಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.