ADVERTISEMENT

ಭಯೋತ್ಪಾದನೆ ಬಿಟ್ಟರೆ ಪಾಕ್‌ ಸಂಬಂಧಕ್ಕೆ ಸಿದ್ಧ: ಭಾರತ

ಪಿಟಿಐ
Published 19 ಜನವರಿ 2023, 14:36 IST
Last Updated 19 ಜನವರಿ 2023, 14:36 IST
ಅರಿಂದಮ್‌ ಬಾಗಚಿ
ಅರಿಂದಮ್‌ ಬಾಗಚಿ   

ನವದೆಹಲಿ: ‘ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ಭಾರತ ಯಾವಾಗಲೂ ಬಯಸುತ್ತದೆ. ಆದರೆ, ಭಯೋತ್ಪಾದನೆ ಹಾಗೂ ಹಿಂಸೆಯಿಂದ ಮುಕ್ತವಾದ ವಾತಾವರಣದಲ್ಲಿ ಮಾತ್ರ ಇಂಥ ಸಂಬಂಧ ಇರಿಸಿಕೊಳ್ಳಲು ಸಾಧ್ಯ’ ಎಂದು ಭಾರತವು ಗುರುವಾರ ಹೇಳಿದೆ.

ಪಾಕಿಸ್ತಾನದ ಪ್ರಧಾನಿ ಶಹಬಾಜ್‌ ಷರೀಫ್ ಅವರು ಕಳೆದ ವಾರ ದುಬೈ ಮೂಲದ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ಕುರಿತು ಹೇಳಲಾದ ಪ್ರಶ್ನೆಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗಚಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

‘ಭಾರತದೊಂದಿಗೆ ಮೂರು ಯುದ್ಧಗಳನ್ನು ಮಾಡಿ, ನಾವು ಪಾಠ ಕಲಿತಿದ್ದೇವೆ. ಭಾರತದೊಂದಿಗೆ ಶಾಂತಿಯಿಂದ ಇರಲು ಈಗ ನಾವು ಬಯಸುತ್ತೇವೆ. ನಮ್ಮ ನಡುವಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ’ ಎಂದು ಪಾಕಿಸ್ತಾನ ಪ್ರಧಾನಿ ಹೇಳಿದ್ದರು.

ADVERTISEMENT

‘ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದನ್ನು ಭಾರತ ಸರ್ಕಾರವು ಹಿಂಪಡೆಯುವವರೆಗೆ ಮಾತುಕತೆ ಸಾಧ್ಯವಿಲ್ಲ’ ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಕಚೇರಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.