ADVERTISEMENT

‘ಉಗ್ರ’ ನಂಟಿನ ಆರೋಪ: ಪೊಲೀಸ್ ವಶದಲ್ಲಿದ್ದ ಶಿಕ್ಷಕ ಸಾವು, ಕುಟುಂಬದಿಂದ ಕೊಲೆ ಆರೋಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2019, 10:27 IST
Last Updated 21 ಮಾರ್ಚ್ 2019, 10:27 IST
   

ಶ್ರೀನಗರ:ಪೊಲೀಸರ ವಶದಲ್ಲಿದ್ದ ಶಿಕ್ಷಕ ರಿಜ್ವಾನ್‌ ಅಸದ್‌ ಪಂಡಿತ್‌ ಮೃತಪಟ್ಟ ಪ್ರಕರಣ ತಿರುವು ಪಡೆದುಕೊಂಡಿದ್ದು, ಆತನನ್ನು ಕೊಲೆ ಮಾಡಲಾಗಿದೆ ಎಂದು ಕುಟುಂಬ ಆರೋಪಿಸಿದೆ.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಅವಂತಿಪೋರಾ ನಿವಾಸಿ ರಿಜ್ವಾನ್‌ ಅಸದ್‌ ಪಂಡಿತ್‌(28) ಉಗ್ರರ ಜತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿಪೊಲೀಸ್‌ ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಜಂಟಿಯಾಗಿ ವಶಕ್ಕೆ ಪಡೆದಿದ್ದವು. ವಿಶೇಷ ಕಾರ್ಯಪಡೆಯ ಪ್ರಧಾನ ಕಚೇರಿಯಲ್ಲಿ ಸೋಮವಾರ ರಾತ್ರಿ ಎನ್‌ಐಎ ವಿಚಾರಣೆ ನಡೆಸುವ ಸಂದರ್ಭದಲ್ಲಿ ಈತ ಮೃತಪಟ್ಟಿದ್ದ.

ರಿಜ್ವಾನ್‌ಅನುಮಾನಾಸ್ಪದವಾಗಿ ಮೃತಪಟ್ಟಿರುವುದನ್ನು ಖಂಡಿಸಿ ಕಣಿವೆ ರಾಜ್ಯದಾದ್ಯಂತ ಮಂಗಳವಾರ ಪ್ರತಿಭಟನೆಗಳು ನಡೆದಿದ್ದವು. ಪ್ರತ್ಯೇಕವಾದಿಗಳು ಬಂದ್‌ಗೆ ಕರೆ ನೀಡಿದ್ದರು.

ADVERTISEMENT

ರಿಜ್ವಾನ್‌ ಸಾವಿನ ಸಂಬಂಧ ಪ್ರತಿಕ್ರಿಯಿಸಿರುವ ಜಮ್ಮುಕಾಶ್ಮೀರ ಪೊಲೀಸರು, ಆತನನ್ನು ವಶಕ್ಕೆ ಪಡೆದು ಪುಲ್ವಾಮಾಗೆ ಕರೆದೊಯ್ಯುವ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಈ ಸಂಬಂಧ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೆವು ಎಂದಿದ್ದಾರೆ.

‘ಆರ್‌ಪಿಸಿ ಸೆಕ್ಷನ್‌ 224ರ(ಕಸ್ಟಡಿಯಿಂದ ಪರಾರಿ/ತಪ್ಪಿಸಿಕೊಳ್ಳಲು ಯತ್ನ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿತ್ತು. ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ ವರದಿಯ ಆಧಾರದಲ್ಲಿ ತನಿಖೆಯನ್ನು ಪುಲ್ವಾಮಾ ಜಿಲ್ಲಾಡಳಿತಕ್ಕೆ ವರ್ಗಾಯಿಸಲಾಗಿದೆ. ಪುಲ್ವಾಮಾದ ಹೆಚ್ಚುವರಿ ಉಪ ಕಮಿಷನರ್‌ 4 ವಾರದೊಳಗಾಗಿ ತನಿಖಾ ವರದಿ ಸಲ್ಲಿಸಲಿದ್ದಾರೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೃತನ ದೇಹದ ಮೇಲೆ ಗಾಯದ ಗುರುತುಗಳು ಇರುವುದಾಗಿ ಆತನ ಸಹೋದರ ಮುಬಾಷಿರ್‌ ಪಂಡಿತ್‌ ಆರೋಪಿಸಿದ್ದಾನೆ. ‘ರಿಜ್ವಾನ್‌ ಕಾಲುಗಳು ನೀಲಿ ಬಣ್ಣಕ್ಕೆ ತಿರುಗಿದ್ದವು. ಆತನ ದೇಹದ ಮೇಲೆ ಗಾಯದ ಗುರುತುಗಳಿದ್ದವು. ಮುಖವೂ ಊದಿಕೊಂಡಿತ್ತು’ ಎಂದು ಅನುಮಾನ ವ್ಯಕ್ತಪಡಿಸಿದ್ದಾನೆ.

ತನ್ನ ಸಹೋದರನನ್ನು ಕೊಲೆ ಮಾಡಿ ಬಳಿಕ ಆತ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ ಎಂದೂ ಆರೋಪಿಸಿದ್ದಾನೆ.

ಭರವಸೆ ಕಳೆದುಕೊಂಡಿರದ ರಿಜ್ವಾನ್‌ ಕುಟುಂಬ, ’ನಾವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಬೇಕಿದ್ದರೆ ಮಾಡಲು ಸಿದ್ಧರಿದ್ದೇವೆ’ ಎಂದಿದೆ. ‘ನನ್ನ ಸೋದರನನ್ನು ಕೊಂದವರು ಆತನನ್ನು ಹೇಗೆ ನಡೆಸಿಕೊಂಡರೋ.. ಅವರನ್ನೂ ಹಾಗೆಯೇ ನಡೆಸಿಕೊಳ್ಳಬೇಕಾಗಿದೆ. ನಾವು ಕೊಲೆಗಾರರನ್ನ ಪತ್ತೆ ಮಾಡಲು ಮತ್ತು ಶಿಕ್ಷೆಗೆ ಒಳಪಡಿಸಲು ನ್ಯಾಯಾಂಗದ ಮೊರೆಹೋಗುತ್ತೇವೆ’ ಎಂದು ಮುಬಾಷಿರ್‌ ಹೇಳಿದ್ದಾನೆ.

ರಿಜ್ವಾನ್‌ ಮೃತಪಟ್ಟಿರುವುದನ್ನು ಜಮ್ಮು ಕಾಶ್ಮೀರ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷ ಸೇರಿದಂತೆ, ಹಿಜ್ಬುಲ್‌ ಮುಜಾಹಿದ್ದೀನ್‌ ಹಾಗೂ ಪ್ರತ್ಯೇಕವಾದಿ ಹೋರಾಟಗಾರರು ಖಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.