ADVERTISEMENT

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ| ಟಿಎಂಸಿ ಮುಂದಿದೆ ಬಿಜೆಪಿಯ ಭಾರಿ ಸವಾಲು

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ: 6ನೇ ಹಂತದ ಮತದಾನ ಇಂದು

ಶೋಮು ದಾಸ್‌
Published 21 ಏಪ್ರಿಲ್ 2021, 19:11 IST
Last Updated 21 ಏಪ್ರಿಲ್ 2021, 19:11 IST
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ    

ಕೋಲ್ಕತ್ತ: ಪಶ್ಚಿಮ ಬಂಗಾಳದ ನಾಲ್ಕು ಜಿಲ್ಲೆಗಳ 43 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ ಮತದಾನ ನಡೆಯಲಿದೆ. ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಬಿಜೆಪಿಯಿಂದ ಭಾರಿ ಸವಾಲು ಎದುರಾಗಬಹುದಾದ ಕ್ಷೇತ್ರಗಳು ಇವು. ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಈ ಪ್ರದೇಶದಲ್ಲಿ ಬಿಜೆಪಿಯ ಮತ ಪ್ರಮಾಣ ನಾಲ್ಕು ಪಟ್ಟು ಹೆಚ್ಚಳವಾಗಿದೆ.

2016ರ ವಿಧಾನಸಭಾ ಚುನಾವಣೆಯಲ್ಲಿ ಈ 43 ಕ್ಷೇತ್ರಗಳಲ್ಲಿ ಒಂದರಲ್ಲಿಯೂ ಬಿಜೆಪಿ ಗೆದ್ದಿಲ್ಲ. ಪಕ್ಷಕ್ಕೆ ಸಿಕ್ಕ ಮತ ಪ್ರಮಾಣ ಶೇ 10.74ರಷ್ಟು. 2019ರ ಲೋಕಸಭಾ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಮತಪ್ರಮಾಣ ಶೇ 40.85ರಷ್ಟಕ್ಕೆ ಏರಿದೆ. ಉತ್ತರ 24 ಪರಗಣ, ಉತ್ತರ ದಿನಜ್‌ಪುರ, ನಾದಿಯಾ ಮತ್ತು ಪೂರ್ವ ವರ್ಧಮಾನ್‌ ಜಿಲ್ಲೆಗಳ ಜನರು ಆರನೇ ಹಂತದಲ್ಲಿ ಮತದಾನ ಮಾಡಲಿದ್ದಾರೆ. ಇಲ್ಲಿ ಒಂದು ಕೋಟಿಗೂ ಹೆಚ್ಚು ಮತದಾರರಿದ್ದು 306 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ 43 ಕ್ಷೇತ್ರಗಳ ಪೈಕಿ 32ರಲ್ಲಿ ಟಿಎಂಸಿ ಗೆಲುವು ಸಾಧಿಸಿತ್ತು. ಶೇ 44.89ರಷ್ಟು ಮತವು ಈ ಪಕ್ಷಕ್ಕೆ ಲಭಿಸಿತ್ತು. ಆದರೆ, ಕಳೆದ ಲೋಕಸಭಾ ಚುನಾವಣೆಯ ಹೊತ್ತಿಗೆ ಟಿಎಂಸಿಯ ಮತ ಪ್ರಮಾಣವು ಶೇ 42.58ರಷ್ಟಕ್ಕೆ ಕುಸಿದಿದೆ. ಲೋಕಸಭಾ ಚುನಾವಣೆಯಲ್ಲಿ ಇಲ್ಲಿನ 24 ಕ್ಷೇತ್ರಗಳಲ್ಲಿ ಟಿಎಂಸಿಗೆ ಮುನ್ನಡೆ ಸಿಕ್ಕರೆ, 19 ಕ್ಷೇತ್ರಗಳಲ್ಲಿ ಬಿಜೆಪಿ ಮುಂದೆ ಇತ್ತು. ವಿಧಾನಸಭಾ ಚುನಾವಣೆಯಲ್ಲಿ ಎಡರಂಗ ನಾಲ್ಕು ಕ್ಷೇತ್ರಗಳಲ್ಲಿ ಮತ್ತು ಕಾಂಗ್ರೆಸ್‌ ಏಳು ಕ್ಷೇತ್ರಗಳಲ್ಲಿ ಗೆದ್ದಿದ್ದವು. ಆದರೆ, ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕ್ಷೇತ್ರದಲ್ಲಿಯೂ ಈ ಪಕ್ಷಗಳಿಗೆ ಮುನ್ನಡೆ ಸಿಕ್ಕಿಲ್ಲ. 2016ರ ವಿಧಾನಸಭಾ ಚುನಾವಣೆಯಲ್ಲಿ ಎಡರಂಗ ಮತ್ತು ಕಾಂಗ್ರೆಸ್‌ ನಡುವೆ ಮೈತ್ರಿ ಇತ್ತು. ಲೋಕಸಭಾ ಚುನಾವಣೆಯಲ್ಲಿ ಈ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

ADVERTISEMENT

ಕಳೆದ ವಿಧಾನಸಭಾ ಚುನಾವಣೆಯಲ್ಲಿಉತ್ತರ 24 ಪರಗಣ ಜಿಲ್ಲೆಯ 17 ಕ್ಷೇತ್ರಗಳ ಪೈಕಿ ಟಿಎಂಸಿ 13ರಲ್ಲಿ, ಕಾಂಗ್ರೆಸ್‌ ಮೂರರಲ್ಲಿ ಮತ್ತು ಸಿಪಿಎಂ ಒಂದರಲ್ಲಿ ಗೆದ್ದಿದ್ದವು. ಆದರೆ, 2019ರ ಲೋಕಸಭಾ ಚುನಾವಣೆಯಲ್ಲಿ ಚಿತ್ರಣ ಬದಲಾಗಿದೆ. 10 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಪಡೆದರೆ, ಟಿಎಂಸಿಗೆ ಏಳು ಕ್ಷೇತ್ರಗಳಲ್ಲಿ ಮಾತ್ರ ಹೆಚ್ಚು ಮತಗಳು ಸಿಕ್ಕಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ದಿನಜ್‌ಪುರ ಜಿಲ್ಲೆಯಲ್ಲಿನ ಒಂಬತ್ತು ಕ್ಷೇತ್ರಗಳಲ್ಲಿ ಟಿಎಂಸಿಗೆ 4, ಸಿಪಿಎಂಗೆ ಒಂದು, ಕಾಂಗ್ರೆಸ್‌ಗೆ ಮೂರು ಮತ್ತು ಫಾರ್ವರ್ಡ್‌ ಬ್ಲಾಕ್‌ ಒಂದು ಕ್ಷೇತ್ರಗಳಲ್ಲಿ ಗೆದ್ದಿದ್ದವು. ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಗೆ ಐದು ಮತ್ತು ಬಿಜೆಪಿಗೆ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಿಕ್ಕಿದೆ.

ಕಳೆದ ವಿಧಾನಸಭಾ ಹಣಾಹಣಿಯಲ್ಲಿ ಪೂರ್ವ ವರ್ಧಮಾನ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳರಲ್ಲಿ ಟಿಎಂಸಿ ಗೆದ್ದಿತ್ತು. ಒಂದು ಸಿಪಿಎಂ ಪಾಲಾಗಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಆರರಲ್ಲಿ ಟಿಎಂಸಿ ಮತ್ತು ಎರಡರಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿದೆ.

ನಾದಿಯಾ ಜಿಲ್ಲೆಯ ಒಂಬತ್ತು ಕ್ಷೇತ್ರಗಳಲ್ಲಿ ಟಿಎಂಸಿ ಕಳೆದ ಬಾರಿ ಎಂಟರಲ್ಲಿ ಗೆದ್ದಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಟಿಎಂಸಿಗೆ ಆರರಲ್ಲಿ ಮುನ್ನಡೆ ದೊರೆತಿದೆ. ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.

ಮತುಆ ಸಮುದಾಯ ನಿರ್ಣಾಯಕ

ಉತ್ತರ 24 ಪರಗಣ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಮತುಆ ಸಮುದಾಯದ ಮತದಾರರೇ ನಿರ್ಣಾಯಕ. ‍‍ಪೂರ್ವ ಪಾಕಿಸ್ತಾನ ಅಥವಾ ಈಗಿನ ಬಾಂಗ್ಲಾದೇಶದಿಂದ ವಲಸೆ ಬಂದು ‍ಪಶ್ಚಿಮ ಬಂಗಾಳದಲ್ಲಿ ನೆಲೆಯಾದ ಮತುಆ ಮತ್ತು ದಲಿತ ಹಿಂದೂ ಸಮುದಾಯದ ಮತದಾರರ ಸಂಖ್ಯೆ ಸುಮಾರು ಮೂರು ಕೋಟಿಯಷ್ಟಿದೆ. ಯಾವುದೇ ಪಕ್ಷವೂ ನಿರ್ಲಕ್ಷಿಸಲಾಗದ ಮತಬ್ಯಾಂಕ್‌ ಇದು. ಪೌರತ್ವ ತಿದ್ದುಪಡಿ ಕಾಯ್ದೆ ಮುಂದಿಟ್ಟು ಈ ವರ್ಗವನ್ನು ಸೆಳೆಯುವ ಯತ್ನವನ್ನು ಬಿಜೆಪಿ ಮಾಡಿದೆ. ಸರ್ಕಾರಿ ಸೌಲಭ್ಯಗಳನ್ನು ಘೋಷಿಸುವ ಮೂಲಕ ಟಿಎಂಸಿಯೂ ಈ ಸಮುದಾಯಗಳ ಮನವೊಲಿಕೆಗೆ ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.