ADVERTISEMENT

ಪಶ್ಚಿಮ ಬಂಗಾಳ: ರಾಜ್ಯಪಾಲರ ವಿರುದ್ಧ ಲೋಕಸಭಾ ಸ್ಪೀಕರ್‌ಗೆ ದೂರು

ಪಿಟಿಐ
Published 23 ಜೂನ್ 2021, 9:05 IST
Last Updated 23 ಜೂನ್ 2021, 9:05 IST
ರಾಜ್ಯಪಾಲ ಜಗದೀಪ್‌ ಧನ್‌ಖರ್
ರಾಜ್ಯಪಾಲ ಜಗದೀಪ್‌ ಧನ್‌ಖರ್   

ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭೆಯ ಅಧ್ಯಕ್ಷ ಬಿಮಾನ್ ಬ್ಯಾನರ್ಜಿ ಅವರು, ‘ಸಂಸದೀಯ ವ್ಯವಹಾರಗಳು ಮತ್ತು ವಿಧಾನಸಭೆಯ ಸದನದ ಕಾರ್ಯಚಟುವಟಿಕೆಗೆ ಸಂಬಂಧಿಸಿದ ವಿಷಯದಲ್ಲಿ ರಾಜ್ಯಪಾಲ ಜಗದೀಪ್‌ ಧನ್‌ಖರ್ ಅವರು ತೀವ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.

ಮಂಗಳವಾರ ನಡೆದ ಅಖಿಲ ಭಾರತ ಸ್ಪೀಕರ್‌ಗಳ ವರ್ಚುವಲ್‌ ಸಮಾವೇಶದಲ್ಲಿ ಬಿಮಾನ್ ಬ್ಯಾನರ್ಜಿ ಅವರು, ಜಗದೀಪ್ ಧನ್‌ಖರ್ ವಿರುದ್ಧ ಬಿರ್ಲಾ ಅವರಿಗೆ ದೂರು ನೀಡಿದ್ದರು.

ಈ ಕುರಿತು ಸುದ್ದಿ ಸಂಸ್ಥೆಗೆ ತಿಳಿಸಿರುವ ಬಿಮಾನ್ ಬ್ಯಾನರ್ಜಿ, ‘ಕೆಲವೊಂದು ಮಸೂದೆಗಳಿಗೆ ವಿಧಾನಸಭೆ ಅಂಗೀಕಾರ ನೀಡಿದ್ದರೂ ರಾಜ್ಯಪಾಲರು ಸಹಿ ಮಾಡದ ಕಾರಣ, ಅವರ ಬಳೀಯೇ ಉಳಿದಿವೆ. ಇದು ಪಶ್ಚಿಮ ಬಂಗಾಳದ ಸಂಸದೀಯ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂಥ ಘಟನೆ ಹಿಂದೆಂದೂ ಸಂಭವಿಸಿಲ್ಲ‘ ಎಂದು ಹೇಳಿದರು.

ADVERTISEMENT

ಆಡಳಿತಾರೂಢ ಟಿಎಂಸಿ ಸರ್ಕಾರದೊಂದಿಗೆ ಉತ್ತಮ ಸಂಬಂಧ ಹೊಂದಿರದ ರಾಜ್ಯಪಾಲ ಜಗದೀಪ್ ಧನಖರ್‌ ಅವರು ಈ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ರಾಜ್ಯಪಾಲರು ಪಕ್ಷವೊಂದರ ಮುಖವಾಣಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವು ಇದನ್ನು ಬಹಳ ದಿನದಿಂದ ಹೇಳುತ್ತಿದ್ದೇವೆ. ಇವರು ಕೇವಲ ಸಂಸದೀಯ ವ್ಯವಹಾರಗಳಷ್ಟೇ ಅಲ್ಲದೇ, ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ‘ ಎಂದು ಹಿರಿಯ ಟಿಎಂಸಿ ನಾಯಕ ಮತ್ತು ಶಾಸಕ ತಪಸ್ ರಾಯ್‌ ಹೇಳಿದ್ದಾರೆ.

ರಾಜ್ಯಪಾಲರ ಬೆಂಬಲಕ್ಕೆ ನಿಂತಿರುವ ಪಶ್ಚಿಮ ಬಂಗಾಳದ ಬಿಜೆಪಿ ಘಟಕ, ರಾಜ್ಯಪಾಲರು ಸತ್ಯವನ್ನೇ ಬಹಿರಂಗಪಡಿಸಿದ್ದಾರೆ ಎಂದು ಹೇಳಿದೆ.

‘ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸರ್ಕಾರದ ವಿರುದ್ಧ ರಾಜ್ಯಪಾಲರು ಕೋಪಗೊಂಡಿದ್ದಾರೆ. ರಾಜ್ಯದಲ್ಲಿರುವ ಪರಿಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಆದರೆ, ಈ ಮೊದಲು ರಾಜ್ಯಪಾಲರ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಆಧಾರ ರಹಿತವಾಗಿವೆ‘ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.