ADVERTISEMENT

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: ಮಮತಾ ವಿರುದ್ಧ ಬಿಜೆಪಿ ನಾಯಕರ ಪ್ರತಿಭಟನೆ

ಪಿಟಿಐ
Published 21 ಜುಲೈ 2021, 15:53 IST
Last Updated 21 ಜುಲೈ 2021, 15:53 IST
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್   

ನವದೆಹಲಿ: ಪಶ್ಚಿಮ ಬಂಗಾಳದ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ವಿರುದ್ಧ ಪ್ರತಿಭಟಿಸಲು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಹಲವಾರು ಸಂಸದರು ಬುಧವಾರ ಧರಣಿ ಕೂತರು.

ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕೊಲ್ಕತ್ತಾದಲ್ಲಿ ತಮ್ಮ ಪಕ್ಷದ ಹುತಾತ್ಮರ ದಿನದ ವಾರ್ಷಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ಪೆಗಾಸಸ್‌ ಗೂಢಚರ್ಯೆಯ ಕುತಂತ್ರಾಂಶ ಬಳಕೆಯಾಗಿರುವ ವಿಚಾರಕ್ಕೆ ಸಂಬಂಧಿಸಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಬಿಜೆಪಿ ಕೂಡ ಪ್ರತಿಭಟನೆಯ ಅಸ್ತ್ರವನ್ನು ಪ್ರಯೋಗಿಸಿದೆ.

ರಾಜ್ಯದಲ್ಲಿನ ಹಿಂಸಾಚಾರಕ್ಕಾಗಿ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಘೋಷ್ ವಾಗ್ದಾಳಿ ನಡೆಸಿದರು.

ADVERTISEMENT

ವಿಧಾನಸಭಾ ಚುನಾವಣೆಯಲ್ಲಿ ಬ್ಯಾನರ್ಜಿ ನೇತೃತ್ವದ ಪಕ್ಷವು ಭಾರಿ ಗೆಲುವು ಸಾಧಿಸಿದ ಬಳಿಕ, ರಾಜ್ಯದ ಹೆಚ್ಚಿನ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಅವರ ಕುಟುಂಬಗಳು ಮತ್ತು ಆಸ್ತಿಗಳನ್ನು ಟಿಎಂಸಿ ಬೆಂಬಲಿಗರು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಆರೋಪಿಸಿದೆ.

ಟಿಎಂಸಿ ಈ ಆರೋಪವನ್ನು ನಿರಾಕರಿಸಿದ್ದು, ಮಮತಾ ಬ್ಯಾನರ್ಜಿ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಹೆಚ್ಚಾಗಿ ಹಿಂಸಾಚಾರ ನಡೆದಿಲ್ಲ ಎಂದು ಹೇಳಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಟ್ವೀಟ್ ಮಾಡಿ, 'ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ವಿರುದ್ಧದ ಚುನಾವಣಾ ಹಿಂಸಾಚಾರವನ್ನು ಇಡೀ ದೇಶವೇ ನೋಡುತ್ತಿದೆ. ಈ ಹಿಂಸಾಚಾರದಲ್ಲಿ, ಮಹಿಳೆಯರು, ದಲಿತರು ಮತ್ತು ಮಕ್ಕಳ ಮೇಲೆಯೇ ಗರಿಷ್ಠ ದೌರ್ಜನ್ಯ ಎಸಗಲಾಗಿದೆ. ಮಮತಾ ಬ್ಯಾನರ್ಜಿಯ ಸರ್ವಾಧಿಕಾರಿ ಮನಸ್ಥಿತಿಯನ್ನು ಕೆಳಗುರುಳಿಸಲು ನಾವು ಪ್ರಜಾಸತ್ತಾತ್ಮಕವಾಗಿ ಹೋರಾಡುತ್ತೇವೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.