ADVERTISEMENT

ಪಶ್ಚಿಮ ಬಂಗಾಳ ಬಜೆಟ್‌: ನಿರುದ್ಯೋಗಿ ಯುವಕರಿಗೆ ಯೋಜನೆ ಸೇರಿ ಹಲವು ಜನಪ್ರಿಯ ಘೋಷಣೆ

ಪಶ್ಚಿಮ ಬಂಗಾಳ: ನಿರುದ್ಯೋಗ ಭತ್ಯೆ ನೀಡುವ ಹೊಸ ಯೋಜನೆ ಜಾರಿ

ಪಿಟಿಐ
Published 5 ಫೆಬ್ರುವರಿ 2026, 13:35 IST
Last Updated 5 ಫೆಬ್ರುವರಿ 2026, 13:35 IST
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಜೆಟ್‌ ಪ್ರತಿಯನ್ನು ಪ್ರದರ್ಶಿಸಿದರು –ಪಿಟಿಐ ಚಿತ್ರ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಬಜೆಟ್‌ ಪ್ರತಿಯನ್ನು ಪ್ರದರ್ಶಿಸಿದರು –ಪಿಟಿಐ ಚಿತ್ರ   

ಕೋಲ್ಕತ್ತ/ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಈ ಹೊತ್ತಿನಲ್ಲಿ ಟಿಎಂಸಿ ಸರ್ಕಾರವು ಗುರುವಾರ 2026–27ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡಿಸಿದೆ. ನಿರುದ್ಯೋಗಿ ಯುವಕರಿಗಾಗಿ ಹೊಸ ಯೋಜನೆಯೂ ಸೇರಿ ಹಲವು ಜನಪ್ರಿಯ ಘೋಷಣೆಗಳನ್ನು ಸರ್ಕಾರ ಮಾಡಿದೆ.

₹4.06 ಲಕ್ಷ ಕೋಟಿ ಗಾತ್ರದ ಬಜೆಟ್‌ ಅನ್ನು ಹಣಕಾಸು ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರು ವಿಧಾನಸಭೆಯಲ್ಲಿ ಮಂಡಿಸಿದರು. ‘ಲಕ್ಷ್ಮೀ ಭಂಡಾರ’ ಯೋಜನೆ ಅಡಿ ಪರಿಶಿಷ್ಟ ಜಾತಿ ಮತ್ತು ವರ್ಗದ ಮಹಿಳೆಯರಿಗೆ ತಿಂಗಳಿಗೆ ₹1,200 ಮತ್ತು ಸಾಮಾನ್ಯ ವರ್ಗ ಮಹಿಳೆಯರಿಗೆ ₹1,000 ನೀಡಲಾಗುತಿತ್ತು. ಈಗ ಎರಡೂ ವರ್ಗದ ಮಹಿಳೆಯರಿಗೆ ಈ ಮೊತ್ತವನ್ನು ₹500ಕ್ಕೆ ಏರಿಸಲಾಗಿದೆ.

‘ನಿರುದ್ಯೋಗಿ ಯುವಕರಿಗಾಗಿ ‘ಬಾಂಗ್ಲಾರ್‌ ಯುವ ಸಾಥಿ’ ಯೋಜನೆಯನ್ನು ಸರ್ಕಾರ ಘೋಷಿಸಿದೆ. 21ರಿಂದ 40 ವರ್ಷದವರಿಗಾಗಿ ಈ ಯೋಜನೆ ರೂಪಿಸಲಾಗಿದ್ದು, ಅವರಿಗೆ ಉದ್ಯೋಗ ದೊರೆಯುವವರೆಗೂ ತಿಂಗಳಿಗೆ ₹1,500 ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಲಾಗಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರ ತಿಂಗಳ ಭತ್ಯೆಯನ್ನು ₹1,000 ನೀಡಲಾಗುವುದು’ ಎಂದು ಸರ್ಕಾರ ಘೋಷಿಸಿದೆ.

ADVERTISEMENT

ಭೂಮಿ ನೀಡಲು ಆಕ್ಷೇಪವಿಲ್ಲ: ‘ಗಡಿ ಉದ್ದಕ್ಕೂ ಬೇಲಿ ನಿರ್ಮಿಸಲು ಭೂಮಿ ನೀಡಲು ಯಾವುದೇ ಆಕ್ಷೇಪವಿಲ್ಲ. ಆದರೆ, ಕೇಂದ್ರ ಸರ್ಕಾರವು ಹೇಳದೆ–ಕೇಳದೆ ಬಿಎಸ್‌ಎಫ್‌ನ ಕಾರ್ಯಾಚರಣೆ ವ್ಯಾಪ್ತಿಯನ್ನು 15 ಕಿ.ಮೀಯಿಂದ 50 ಕಿ.ಮೀಗೆ ವಿಸ್ತರಿಸಿದೆ. ಕೇಂದ್ರವು ಈ ರೀತಿ ನಿರ್ಧಾರ ತೆಗೆದುಕೊಂಡಿರುವುದನ್ನು ಹಿಂಪಡೆಯಬೇಕು’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.

ಭಾರತ–ಬಾಂಗ್ಲಾದೇಶದ ಗಡಿ ಉದ್ದಕ್ಕೂ ಬೇಲಿ ನಿರ್ಮಿಸುವ ಸಲುವಾಗಿ ಭೂಮಿ ನೀಡುವ ವಿಚಾರದಲ್ಲಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂಬ ಆರೋಪದ ಕುರಿತು ಮಮತಾ ಅವರು ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದರು. ‘ಈ ಸಂಬಂಧ ಬಿಎಸ್‌ಎಫ್‌ ಸೇರಿ ಕೇಂದ್ರದ ಸಂಸ್ಥೆಗಳಿಗೆ ಈಗಾಗಲೇ ಭೂಮಿ ನೀಡಲಾಗಿದೆ’ ಎಂದರು.

ಎಸ್‌ಐಆರ್‌ ವಿರುದ್ಧ ನಿರ್ಣಯ ಮಂಡನೆ ಕುರಿತು ಚರ್ಚೆ: ವಿವಾದ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ವಿರುದ್ಧ ರಾಜ್ಯ ಸರ್ಕಾರ ನಿರ್ಣಯ ಮಂಡಿಸಿತು. ಆದರೆ ಎಸ್‌ಐಆರ್ ‍ಪ್ರಕ್ರಿಯೆ ಕುರಿತು ಚರ್ಚಿಸಲು ಸ್ಪೀಕರ್‌ ಅನುಮತಿ ನೀಡಲಿಲ್ಲ. ಚರ್ಚೆ ನಡೆಯದಿರುವ ಬಗ್ಗೆ ಟಿಎಂಸಿ ಹಾಗೂ ಬಿಜೆಪಿ ಮಧ್ಯೆ ವಾಕ್ಸಮರ ನಡೆಯಿತು. ‘ಎಸ್‌ಐಆರ್‌ ಪ್ರಕ್ರಿಯೆ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಚರ್ಚೆಗೆ ಅವಕಾಶ ನೀಡುವುದಿಲ್ಲ’ ಎಂದು ಸ್ಪೀಕರ್‌ ಬಿಮಾನ್‌ ಬ್ಯಾನರ್ಜಿ ಹೇಳಿದರು. ಎಸ್‌ಐಆರ್‌ ಬಗ್ಗೆ ಚರ್ಚೆಗೆ ಅವಕಾಶ ನೀಡವಂತೆ ಸರ್ಕಾರ ಅವಕಾಶ ಕೋರಿತ್ತು. ‘ವಿಧಾನಸಭೆ ವ್ಯವಹಾರಗಳ ಸಲಹಾ ಸಮಿತಿಯು ಕೊನೇ ಹಂತದಲ್ಲಿ ಚರ್ಚೆ ವಿಷಯವನ್ನು ಬದಲು ಮಾಡಿದೆ. ಎಸ್‌ಐಆರ್‌ ಕುರಿತ ಚರ್ಚೆಗೆ ಸಿದ್ಧವಾಗಿ ಬಂದಿದ್ದೆವು. ಈಗ ಇದನ್ನು ಬದಲು ಮಾಡಲಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಹೇಳಿದರು.

ಬಾಕಿ ತುಟ್ಟಿ ಭತ್ಯೆ ನೀಡಿ:ಸುಪ್ರೀಂ’ ಸೂಚನೆ

‘ತುಟ್ಟಿ ಭತ್ಯೆಯು ಸರ್ಕಾರಿ ನೌಕರರ ಹಕ್ಕು’ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್‌ ‘2008ರಿಂದ 2019ರವರೆಗೆ ತುಟ್ಟಿ ಭತ್ಯೆ ನೀಡಿ’ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಗುರುವಾರ ಸೂಚನೆ ನೀಡಿದೆ.  ‘ಈ ಅವಧಿಯಲ್ಲಿ ನೀಡದಿರುವ ಒಟ್ಟು ತುಟ್ಟಿ ಭತ್ಯೆ ಮೊತ್ತದ ಶೇ 25ರಷ್ಟು ಹಣವನ್ನು ಮಾರ್ಚ್‌ 6ರ ಒಳಗೆ ಎಲ್ಲ ನೌಕರರಿಗೂ ನೀಡಬೇಕು’ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕರೋಲ್‌ ಮತ್ತು ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರ ಪೀಠವು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನೌಕರರಿಗೆ ನೀಡಲು ವಾಕಿ ಇರುವ ತುಟ್ಟಿ ಭತ್ಯೆಗೆ ಸಂಬಂಧಿಸಿ ಹಣಕಾಸಿನ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲು ಸುಪ್ರೀಂ ಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಕರು ಸಂಸ್ಥೆಯ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ಪೀಠ ರಚಿಸಿತು. 

‘ಬೆಲೆ ಏರಿಕೆಯ ಸಂದರ್ಭದಲ್ಲಿ ನೌಕರರ ರಕ್ಷಣೆಗೆ ಬರುವುದೇ ತುಟ್ಟಿ ಭತ್ಯೆಯಾಗಿದೆ. ಆದ್ದರಿಂದ ಕಲ್ಯಾಣ ರಾಜ್ಯವೊಂದರ ಶಕ್ತಿ ಇದಾಗಲಿದೆ. ತುಟ್ಟಿ ಭತ್ಯೆಯು ಹೆಚ್ಚುವರಿ ಸೌಲಭ್ಯವಲ್ಲ. ಅದು ಜೀವನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಇರುವ ಕನಿಷ್ಠ ಮಾರ್ಗವಾಗಿದೆ’ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.