ADVERTISEMENT

ಪ.ಬಂಗಾಳ ಜನಾದೇಶಕ್ಕೆ ಬಿಜೆಪಿ ಮನ್ನಣೆ ನೀಡುತ್ತಿಲ್ಲ: ಮಮತಾ ಬ್ಯಾನರ್ಜಿ

ಏಜೆನ್ಸೀಸ್
Published 8 ಮೇ 2021, 10:12 IST
Last Updated 8 ಮೇ 2021, 10:12 IST
ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಮಮತಾ ಬ್ಯಾನರ್ಜಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಜನಾದೇಶಕ್ಕೆ ಬಿಜೆಪಿ ಮನ್ನಣೆ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ವಿರುದ್ಧ ಕೇಂದ್ರ ಸರ್ಕಾರ ತಾರತಮ್ಯ ನೀತಿ ತೋರುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಬಂಗಾಳದೊಂದಿಗೆ ಅಷ್ಟೊಂದು ತಾರತಮ್ಯ ಯಾಕೆ? ಪ್ರಮಾಣವಚನ ಸ್ವೀಕರಿಸಿದ 24 ತಾಸಿನೊಳಗೆ ಕೇಂದ್ರ ತಂಡವನ್ನು ರಾಜ್ಯಕ್ಕೆ ರವಾನಿಸಲಾಗಿದೆ. ನಿಜವಾಗಿಯೂ, ಅವರು (ಬಿಜೆಪಿ) ಜನಾದೇಶಕ್ಕೆ ಮನ್ನಣೆ ನೀಡಲು ಸಿದ್ಧರಿಲ್ಲ. ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಅವರು ನಕಲಿ ಸುದ್ದಿ ಹಾಗೂ ವಿಡಿಯೊಗಳನ್ನು ಹರಡುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಟೀಕಿಸಿದ್ದಾರೆ.

ADVERTISEMENT

213 ಸ್ಥಾನಗಳ ಭಾರಿ ಬಹುಮತದೊಂದಿಗೆ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೇರಿದೆ. ಇದು ಪ್ರಚಂಡ ಹಾಗೂ ಐತಿಹಾಸಿಕ ಗೆಲುವು. ಬಂಗಾಳದ ಜನತೆ ಹಾಗೂ ಬಂಗಾಳದ ಮಹಿಳೆಯರಿಂದಾಗಿ ಇದು ಸಾಧ್ಯವಾಗಿದೆ ಎಂದು ಮಮತಾ ಹೇಳಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ 77 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಅತಿ ದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. ಅತ್ತ ಕಾಂಗ್ರೆಸ್ ಹಾಗೂ ಎಡರಂಗವು ಖಾತೆ ತೆರೆಯುವಲ್ಲಿ ವಿಫಲವಾಗಿದೆ.

ಈ ನಡುವೆ ಚುನಾವಣಾ ಆಯೋಗದ ವಿರುದ್ಧವೂ ಮಮತಾ ಬ್ಯಾನರ್ಜಿ ಕಿಡಿ ಕಾರಿದರು.

ತಕ್ಷಣ ಚುನಾವಣಾ ಆಯೋಗದಲ್ಲಿ ಸುಧಾರಣೆಯಾಗಬೇಕಿದೆ. ಬಂಗಾಳ ಎಂದಿಗೂ ತಲೆಬಾಗುವುದಿಲ್ಲ. ನಮ್ಮನ್ನು ಸೋಲಿಸಲು ಪಿತೂರಿ ನಡೆಯಿತು. ಎಲ್ಲ ಕೇಂದ್ರ ಸಚಿವರು ಇಲ್ಲಿಗೆ ಆಗಮಿಸಿದರು. ವಿಮಾನ ಹಾಗೂ ಹೋಟೆಲ್‌ಗಳಿಗಾಗಿ ಎಷ್ಟು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಹಣ ನೀರಿನಂತೆ ಹರಿಯುತ್ತಿತ್ತು ಎಂದು ಆರೋಪಿಸಿದ್ದಾರೆ.

ವಿಧಾನಸಭಾ ಚುನಾವಣೆ ಬೆನ್ನಲ್ಲೇ ಬಂಗಾಳದಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿತ್ತು. ಒಂಬತ್ತು ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಇದನ್ನೆಲ್ಲ ಟಿಎಂಸಿ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.