ADVERTISEMENT

ಟಿಎಂಸಿ, ಕಾಂಗ್ರೆಸ್, ಎಡರಂಗವು ಹೊರಗಿನವರನ್ನು ಅವಲಂಬಿಸಿವೆ: ಅಮಿತ್ ಶಾ

ಪಿಟಿಐ
Published 13 ಏಪ್ರಿಲ್ 2021, 12:20 IST
Last Updated 13 ಏಪ್ರಿಲ್ 2021, 12:20 IST
ಕೇಂದ್ರ ಗೃಹ ಸಚಿವ ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ   

ಕೋಲ್ಕತ್ತ (ಪ.ಬಂಗಾಳ): ತೃಣಮೂಲ ಕಾಂಗ್ರೆಸ್, ಎಡರಂಗ ಮತ್ತು ಕಾಂಗ್ರೆಸ್ ಪಕ್ಷಗಳು ಹೊರಗಿನವರನ್ನು ಅವಲಂಬಿಸಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಆರೋಪಿಸಿದ್ದಾರೆ.

ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪದೇ ಪದೇ 'ಹೊರಗಿನವರು' ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಬಂಗಾಳ ಮುಖ್ಯಮಂತ್ರಿಗೆ ಜ್ಞಾನದ ಕೊರತೆಯಿದೆ ಎಂದು ತಿರುಗೇಟು ನೀಡಿದ್ದಾರೆ.

'ಪ್ರಧಾನಿ ಮೋದಿ ಹೊರಗಿನವರು ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹೇಳುತ್ತಿದ್ದಾರೆ. ಆದರೆ ಅವರ ಪಕ್ಷವೇ ಅಕ್ರಮ ವಲಸಿಗರ ಮತಗಳನ್ನು ಅವಲಂಬಿಸಿವೆ. ನಾನು ಹೊರಗಿನವನೇ? ನಾನು ದೇಶದ ಪ್ರಜೆಯಲ್ಲವೇ? ಭಾರತದ ಪ್ರಧಾನಿ ಹೊರಗಿನವರೆಂದು ದೀದಿ ಹೇಳುತ್ತಿದ್ದಾರೆ' ಎಂದು ಜಲ್ಪೈಗುರಿಯಲ್ಲಿ ನಡೆದ ಚುನಾವಣಾ ಪ್ರಚಾರ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.

ADVERTISEMENT

'ದೀದಿ, ಹೊರಗಿನವರು ಯಾರು ಎಂದು ನಾನು ನಿಮಗೆ ವಿವರಿಸುತ್ತೇನೆ. ಕಮ್ಯುನಿಸ್ಟರು ರಷ್ಯಾ ಹಾಗೂ ಚೀನಾದ ಸಿದ್ಧಾಂತಗಳನ್ನು ಆಮದು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕತ್ವವೇ ಹೊರಗಿನವರಾಗಿದ್ದಾರೆ. ಅದು ಇಟಲಿಯಿಂದ ಬಂದಿವೆ. ಮತ್ತೆ ತೃಣಮೂಲ ಕಾಂಗ್ರೆಸ್ - ಅವರ ವೋಟ್ ಬ್ಯಾಂಕ್ ಅಕ್ರಮ ವಲಸಿಗರಾಗಿದ್ದಾರೆ' ಎಂದು ಅಮಿತ್ ಶಾ ಆರೋಪಿಸಿದ್ದಾರೆ.

ಹಾಗಾದ್ದಲ್ಲಿ ನಾನು ಹೊರಗಿನವನಾಗುವುದು ಹೇಗೆ ? ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕತ್ವವು ಹೊರಗಿನವರು ಎಂದು ಬ್ಯಾನರ್ಜಿ ಪ್ರತಿದಿನ ಆರೋಪಿಸುತ್ತಾರೆ. ಆದರೆ ರಾಜ್ಯದ ಜನರನ್ನು ದೀರ್ಘಕಾಲ ಮೋಸಗೊಳಿಸಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿ ಈ ಮಣ್ಣಿನ ಮಗ ಎಂದು ಹೇಳಿದ್ದಾರೆ.

ಏಪ್ರಿಲ್ 10ರಂದು ನಾಲ್ಕನೇ ಹಂತದ ಮತದಾನದ ವೇಳೆ ಕೂಚ್ ಬಿಹಾರ್‌ನ ಸಿತಾಲಕುಚಿಯಲ್ಲಿ ಭದ್ರತಾಪಡೆಯ ಗುಂಡೇಟಿಗೆ ಟಿಎಂಸಿಯ ನಾಲ್ವರು ಮೃತಪಟ್ಟಿದ್ದರು. ಬಳಿಕ ಅಮಿತ್ ಶಾ ರಾಜೀನಾಮೆಗೆ ಮಮತಾ ಪಟ್ಟು ಹಿಡಿದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಈ ಚುನಾವಣೆಯು ನನ್ನ ರಾಜೀನಾಮೆಯ ವಿಷಯವಲ್ಲ. ಬದಲಾಗಿ ಮೇ 2ರಂದು ನೀವು (ಮಮತಾ) ರಾಜೀನಾಮೆ ಸಲ್ಲಿಸಬೇಕಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.