ADVERTISEMENT

ಬಿಜೆಪಿಯನ್ನು ಮಣಿಸಲು ಬಂಗಾಳಕ್ಕೆ ಭೇಟಿ ನೀಡಲಿರುವ ರಾಕೇಶ್ ಟಿಕಾಯತ್

ಪಿಟಿಐ
Published 10 ಮಾರ್ಚ್ 2021, 15:04 IST
Last Updated 10 ಮಾರ್ಚ್ 2021, 15:04 IST
   

ಬಲ್ಲಿಯಾ (ಉ. ಪ್ರದೇಶ): ಈ ವಾರ ಕೋಲ್ಕತ್ತಗೆ ತೆರಳಿ ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವಂತೆ ರೈತರನ್ನು ಒತ್ತಾಯಿಸುವುದಾಗಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.

ಹಾಗಿದ್ದರೂ ತಾವು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂಬುದನ್ನು ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ. ರೈತರು ಸಂಕಷ್ಟಕ್ಕೀಡಾಗಿದ್ದು, ಅವರೊಂದಿಗೆ ಚುನಾವಣೆಯ ಬಗ್ಗೆ ಚರ್ಚಿಸಲಾಗುವುದು ಎಂದು ಟಿಕಾಯತ್ ಹೇಳಿದರು.

ಮಾರ್ಚ್ 13ರಂದು ನಾನು ಕೋಲ್ಕತ್ತಗೆ ತೆರಳುತ್ತೇನೆ. ರೈತರ ಹೋರಾಟ ಸಂಬಂಧ ಬಲವಾದ ಬೇಡಿಕೆ ಕೋಲ್ಕತ್ತದಿಂದ ಹೊರಬರಲಿದೆ. ನಾವು ಅಲ್ಲಿ ರೈತರೊಂದಿಗೆ ಸಮಾಲೋಚನೆ ಮಾಡಿ ಬಿಜೆಪಿಯನ್ನು ಸೋಲಿಸುವಂತೆ ಮನವಿ ಮಾಡಲಿದ್ದೇವೆ ಎಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್‌ನಲ್ಲಿ ತಿಳಿಸಿದರು.

ADVERTISEMENT

ಬಂಗಾಳ ಭೇಟಿಯ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಟಿಕಾಯತ್, ಅಂತಹ ಯಾವುದೇ ಕಾರ್ಯಕ್ರಮಗಳಿಲ್ಲ ಎಂದು ಹೇಳಿದರು.

ಮಾರ್ಚ್ 27ರಿಂದ ಆರಂಭವಾಗಲಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸಲು ಈಗಾಗಲೇ ಕರೆ ನೀಡಲಾಗಿದೆ. ಆದರೆ ರೈತರ ಒಕ್ಕೂಟ ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಿದರು.

ಏತನ್ಮಧ್ಯೆ ರೈತರ ಪ್ರತಿಭಟನೆ ಮುಂದುವರಿಯುತ್ತಿದ್ದು, ಸರ್ಕಾರದ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ರಾಕೇಶ್ ಟಿಕಾಯತ್ ಪುನರುಚ್ಛರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.