ADVERTISEMENT

ಮಮತಾ ಮೇಲಿನ ದಾಳಿಗೆ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿದ ರಾಜಕೀಯ ನಾಯಕರು

ಏಜೆನ್ಸೀಸ್
Published 11 ಮಾರ್ಚ್ 2021, 6:25 IST
Last Updated 11 ಮಾರ್ಚ್ 2021, 6:25 IST
ಅರವಿಂದ್‌ ಕೇಜ್ರಿವಾಲ್‌, ಆನಂದ್‌ ಶರ್ಮಾ, ಎಂ.ಕೆ.ಸ್ಟಾಲಿನ್‌
ಅರವಿಂದ್‌ ಕೇಜ್ರಿವಾಲ್‌, ಆನಂದ್‌ ಶರ್ಮಾ, ಎಂ.ಕೆ.ಸ್ಟಾಲಿನ್‌   

ನವದೆಹಲಿ/ಚೆನ್ನೈ: ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರ ಮೇಲೆ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಬುಧವಾರ ನಡೆದ ದಾಳಿಯನ್ನು ಹಲವು ರಾಜಕೀಯ ಮುಖಂಡರು ಖಂಡಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, 'ಮಮತಾ ದೀದಿ ಮೇಲಿನ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ಶೀಘ್ರ ಗುಣಮುಖರಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಈ ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಿ ಶಿಕ್ಷಿಸಬೇಕು' ಎಂದು ಒತ್ತಾಯಿಸಿದ್ದಾರೆ.

'ಮಮತಾ ಬ್ಯಾನರ್ಜಿ ಮೇಲಿನ ದಾಳಿಯು ಭಾರತದ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇಂತಹ ಅಪರಾಧ ಎಸಗಿದವರಿಗೆ ಈ ಕೂಡಲೇ ಶಿಕ್ಷೆ ಆಗಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ತಪ್ಪಿಸಲು ಭಾರತದ ಚುನಾವಣಾ ಆಯೋಗ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಡಿಎಂಕೆ ನಾಯಕ ಸ್ಟಾಲಿನ್ ಟ್ವೀಟ್ ಮಾಡಿದ್ದಾರೆ.

ADVERTISEMENT

ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಹಿರಿಯ ನಾಯಕ ಆನಂದ್‌ ಶರ್ಮಾ, ' ಪ್ರಜಾಪ್ರಭುತ್ವದಲ್ಲಿ ದ್ವೇಷ ಮತ್ತು ಹಿಂಸೆ ಸ್ವೀಕಾರಾರ್ಹವಲ್ಲ. ಅದನ್ನು ನಾವು ಖಂಡಿಸಲೇಬೇಕಿದೆ. ಟಿಎಂಸಿ ನಾಯಕಿಯ ತ್ವರಿತ ಚೇತರಿಕೆಗೆ ನಾನು ಪ್ರಾರ್ಥಿಸುತ್ತೇನೆ' ಎಂದು ಟ್ವೀಟ್‌ ಮೂಲಕ ತಿಳಿಸಿದ್ದಾರೆ.

ನಂದಿಗ್ರಾಮ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಬುಧವಾರ ನಾಮಪತ್ರ ಸಲ್ಲಿಸಿದ ಬಳಿಕ ಮಮತಾ ಅವರ ಮೇಲೆ ದಾಳಿ ನಡೆದಿದೆ. ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ವರದಿ ಕೇಳಿದೆ.

'ಕೆಲವು ಅಪರಿಚಿತರು ತಮ್ಮನ್ನು ತಳ್ಳಿದ್ದೂ ಅಲ್ಲದೇ ಎಡಗಾಲಿಗೆ ಗಾಯ ಆಗುವಂತೆ ಕಾರಿನ ಬಾಗಿಲನ್ನು ಬಲವಾಗಿ ಮುಚ್ಚಿದ್ದಾರೆ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಈ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲು ಟಿಎಂಸಿ ನಿರ್ಧರಿಸಿದೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್‌ 27ರಂದುವಿಧಾನಸಭೆ ಚುನಾವಣೆ ಆರಂಭವಾಗಲಿದ್ದು, 8 ಹಂತಗಳಲ್ಲಿ ಮತದಾನ ನಡೆಯಲಿದೆ. ಏಪ್ರಿಲ್ 29ಕ್ಕೆ ಮತದಾನ ಮುಕ್ತಾಯಗೊಳ್ಳಲಿದೆ. ಮೇ 2ರಂದು ಚುನಾವಣಾ ಫಲಿತಾಂಶ ಹೊರಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.