ಹಲ್ಲೆ
– ಗೆಟ್ಟಿ ಚಿತ್ರ
ನವದೆಹಲಿ: ‘ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರನ್ನು ಬಾಂಗ್ಲಾದೇಶದ ಒಳನುಸುಳುಕೋರರು ಎಂದು ಭಾವಿಸಿ ಅವರನ್ನು ಹತ್ಯೆ ಮಾಡಲಾಗುತ್ತಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಇಂಥ ಪ್ರಕರಣಗಳು ನಡೆಯುತ್ತಿವೆ’ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಂಗಳವಾರ ಭೇಟಿ ಮಾಡಿ ಪತ್ರ ನೀಡಿದರು.
‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ತಾರತಮ್ಯ, ಹಿಂಸೆ, ದ್ವೇಷ, ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಅವರನ್ನು ಹೊಡೆದು ಕೊಲ್ಲಲಾಗುತ್ತಿದೆ. ಬಂಗಾಳಿ ಭಾಷೆ ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಅವರನ್ನು ಬಾಂಗ್ಲಾದೇಶದವರು ಎಂದು ತಪ್ಪಾಗಿ ಭಾವಿಸಲಾಗುತ್ತಿದೆ’ ಎಂದು ಚೌಧರಿ ಅವರು ಪತ್ರದಲ್ಲಿ ಹೇಳಿದ್ದಾರೆ.
‘ಬಾಂಗ್ಲಾದೇಶದವರು ಮತ್ತು ಬಂಗಾಳಿ ಮಾತನಾಡುವವರ ಮಧ್ಯೆ ಇರುವ ವ್ಯತ್ಯಾಸವೂ ಅಧಿಕಾರಿಗಳಿಗೆ, ಪೊಲೀಸರಿಗೆ ತಿಳಿಯುತ್ತಿಲ್ಲ. ಪಶ್ಚಿಮ ಬಂಗಾಳದವರನ್ನು ಬಂಧಿಸಿ, ಬಂಧನ ಕೇಂದ್ರಗಳಿಗೆ ತಳ್ಳಲಾಗುತ್ತಿದೆ. ಆದ್ದರಿಂದ, ಈ ವ್ಯತ್ಯಾಸ ಕುರಿತು ಸೂಕ್ಷ್ಮತೆ ರೂಢಿಸಿಕೊಳ್ಳುವ ಬಗ್ಗೆ ಎಲ್ಲ ರಾಜ್ಯಗಳಿಗೂ ತಿಳಿಸಿಕೊಡಿ’ ಎಂದು ಕೋರಿದರು.
ಪಶ್ಚಿಮ ಬಂಗಾಳ ವಲಸೆ ಕಾರ್ಮಿಕ ಮಂಡಳಿಗೆ ಕಳೆದ 10 ತಿಂಗಳಲ್ಲಿ 1,143 ದೂರುಗಳು ಬಂದಿವೆ. ಕಳೆದ ಬುಧವಾರ ಒಡಿಶಾದಲ್ಲಿ ಪಶ್ಚಿಮ ಬಂಗಾಳದ 30 ವರ್ಷದ ವಲಸೆ ಕಾರ್ಮಿಕರೊಬ್ಬರನ್ನು ಹತ್ಯೆ ಮಾಡಲಾಗಿದೆ. ಮುಂಬೈನಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.