ADVERTISEMENT

SIR | ಪಶ್ಚಿಮ ಬಂಗಾಳದ ಮತದಾರರ ಕರಡು ಪಟ್ಟಿ ಪ್ರಕಟ: 58 ಲಕ್ಷ ಮತದಾರರಿಗೆ ಕೊಕ್

ಪಿಟಿಐ
Published 16 ಡಿಸೆಂಬರ್ 2025, 18:40 IST
Last Updated 16 ಡಿಸೆಂಬರ್ 2025, 18:40 IST
   

ಕೋಲ್ಕತ್ತ: ಕೇಂದ್ರ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ. ಸಾವು, ಶಾಶ್ವತ ವಲಸೆ ಮತ್ತು ಅರ್ಜಿ ನಮೂನೆಗಳನ್ನು ಸಲ್ಲಿಸದಿರುವುದು ಸೇರಿದಂತೆ ವಿವಿಧ ಕಾರಣಗಳಿಗಾಗಿ 58 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಕೈಬಿಟ್ಟಿದೆ.

ನವೆಂಬರ್ 4ರಿಂದ ಡಿಸೆಂಬರ್11ರವರೆಗೆ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ನಡೆಸಿದ ನಂತರ ಅನರ್ಹ ಮತದಾರರ ಹೆಸರುಗಳನ್ನು ಕರಡು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಆಯೋಗವು ತಿಳಿಸಿದೆ. ಎಸ್‌ಐಆರ್‌ ಪ್ರಕ್ರಿಯೆ ಬಳಿಕ ರಾಜ್ಯದ ಮತದಾರರ ಸಂಖ್ಯೆ 7.66 ಕೋಟಿಯಿಂದ 7.08 ಕೋಟಿಗೆ ಇಳಿದಿದೆ.

ಕರಡು ಪಟ್ಟಿಗೆ ಸಂಬಂಧಿಸಿದಂತೆ ಮತದಾರರು ಸಲ್ಲಿಸುವ ಆಕ್ಷೇಪಣೆ, ಅಹವಾಲು ಆಲಿಸುವ ಪ್ರಕ್ರಿಯೆಯು ಇನ್ನೊಂದು ವಾರದಲ್ಲಿ ಪ್ರಾರಂಭವಾಗಲಿದೆ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಹೆಸರು ಕೈಬಿಟ್ಟ ಮತದಾರರಿಗೆ ನೀಡಬೇಕಿರುವ ನೋಟಿಸ್‌ ಅನ್ನು ಮುದ್ರಿಸಿ, ಸಂಬಂಧಪಟ್ಟ ಮತದಾರರಿಗೆ ಅವುಗಳನ್ನು ತಲುಪಿಸಲು ಮತ್ತು ಚುನಾವಣಾ ಆಯೋಗದ ಡಾಟಾಬೇಸ್‌ನಲ್ಲಿ ಮಾಹಿತಿ ಸಂಗ್ರಹಿಸುವುದಕ್ಕೆ ಸಮಯ ಬೇಕಿದೆ. ಆದ್ದರಿಂದ ಅಹವಾಲು ಆಲಿಸುವ ಪ್ರಕ್ರಿಯೆ ಒಂದು ವಾರದ ಬಳಿಕ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇದಲ್ಲದೆ, 2002ರ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಾಣಿಕೆಯಾಗದ ಸುಮಾರು 85 ಲಕ್ಷ ಮತದಾರರ ಅರ್ಜಿ ನಮೂನೆಗಳನ್ನು ಆಯೋಗ ಸ್ವೀಕರಿಸಿದ್ದು, ಅಹವಾಲು ಆಲಿಸಲು ಅವರಿಗೂ ನೋಟಿಸ್‌ ಕಳುಹಿಸುವ ಸಾಧ್ಯತೆಯಿದೆ ಎಂದಿದ್ದಾರೆ.

ಅಹವಾಲು ಆಲಿಸಲು ಆಯೋಗವು ನೋಟಿಸ್‌ ಕಳುಹಿಸಬಹುದಾದ ಮತದಾರರ ನಿಖರ ಸಂಖ್ಯೆ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಈ ಸಂಖ್ಯೆ ಎರಡು ಕೋಟಿಯನ್ನು ತಲುಪಬಹುದು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟವರಿಗೆ ಫಾರ್ಮ್‌ 6 ಮತ್ತು ಅಗತ್ಯ ದಾಖಲೆಗಳೊಂದಿಗೆ ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು 2026ರ ಜನವರಿಗೆ 15ರವರೆಗೆ ಅವಕಾಶವಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. 

ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದೇ ಇರುವ ಮತದಾರರು ಆತಂಕಪಡುವ ಅಗತ್ಯವಿಲ್ಲ ಎಂದು ಎಸ್‌ಐಆರ್‌ ಪ್ರಕ್ರಿಯೆಯ ಪಶ್ಚಿಮ ಬಂಗಾಳದ ಉಸ್ತುವಾರಿ ಸುಬ್ರತಾ ಗುಪ್ತಾ ತಿಳಿಸಿದ್ದಾರೆ. 2002ರ ಮತದಾರರ ಪಟ್ಟಿಯೊಂದಿಗೆ ವಿವರಗಳನ್ನು ಹೊಂದಿಸಲು ಸಾಧ್ಯವಾಗದ ಸುಮಾರು 30 ಲಕ್ಷ ಮತದಾರರಿಗೆ ತಮ್ಮ ಅರ್ಹತೆ ಸಾಬೀತುಪಡಿಸಲು ಆಯೋಗವು ಅವಕಾಶ ನೀಡಲಿದೆ ಎಂದು ಹೇಳಿದೆ.

ಆಯೋಗದ ಜಿಲ್ಲಾವಾರು ಮಾಹಿತಿ ಪ್ರಕಾರ ದಕ್ಷಿಣ 24ಪರಗಣ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ, 8.16 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಭವಾನಿಪುರ ಕ್ಷೇತ್ರದಲ್ಲಿ 44,787 ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲಾಗಿದೆ. 2025ರ ಜನವರಿಯಲ್ಲಿ ಪ್ರಕಟಗೊಂಡ ಪಟ್ಟಿಯಲ್ಲಿ ಇಲ್ಲಿ ಒಟ್ಟು 2.06 ಲಕ್ಷ ಮತದಾರರಿದ್ದರು.

ರಾಜಸ್ಥಾನ: 42 ಲಕ್ಷ ಮತದಾರರು ‘ಔಟ್’

ಜೈಪುರ: ರಾಜಸ್ಥಾನದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಬಳಿಕ ಸುಮಾರು 42 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ನವೀನ್‌ ಮಹಾಜನ್‌ ಮಂಗಳವಾರ ತಿಳಿಸಿದ್ದಾರೆ.

5.46 ಕೋಟಿ ಮತದಾರರಲ್ಲಿ 41.85 ಲಕ್ಷ ಮಂದಿಯ ಅಅರ್ಜಿ ನಮೂನೆಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ. ಏಕೆಂದರೆ ಅವರಲ್ಲಿ ಹಲವರು ಮೃತಪಟ್ಟಿದ್ದಾರೆ, ಶಾಶ್ವತವಾಗಿ ವಲಸೆ ಹೋಗಿದ್ದಾರೆ, ಸ್ಥಳಾಂತರಗೊಂಡಿದ್ದಾರೆ ಅಥವಾ ಗಣತಿಯ ಸಮಯದಲ್ಲಿ ಗೈರಾಗಿದ್ದಾರೆ ಎಂದು ಹೇಳಿದ್ದಾರೆ.

ಗೋವಾದಲ್ಲಿ 1.01 ಲಕ್ಷ ಮತದಾರರು (ಒಟ್ಟು ಮತದಾರರು 11.85 ಲಕ್ಷ), ಪುದುಚೇರಿಯಲ್ಲಿ 1.03 ಲಕ್ಷ ಮತದಾರರು (ಒಟ್ಟು ಮತದಾರರು 10.21ಲಕ್ಷ) ಮತ್ತು ಲಕ್ಷದ್ವೀಪದಲ್ಲಿ ಸುಮಾರು ಒಂದೂವರೆ ಸಾವಿರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. 

ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್: ನಡ್ಡಾ

ನವದೆಹಲಿ: ಎಸ್‌ಐಆರ್ ಪ್ರಕ್ರಿಯೆ ಮೂಲಕ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂಬ ಸುಳ್ಳು ಸಂಕಥನವನ್ನು ಸೃಷ್ಟಿಸಿರುವ ಕಾಂಗ್ರೆಸ್ ಪಕ್ಷವು ದೇಶದ ಜನರ ದಾರಿ ತಪ್ಪಿಸುತ್ತಿದೆ ಎಂದು ಕೇಂದ್ರ ಸಚಿವ ಜೆ.ಪಿ.ನಡ್ಡಾ ಮಂಗಳವಾರ ಆರೋಪಿಸಿದ್ದಾರೆ.

ಚುನಾವಣಾ ವ್ಯವಸ್ಥೆಯ ಸುಧಾರಣೆ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಪ್ರತಿ ಪಕ್ಷಗಳು ಚುನಾವಣೆಯಲ್ಲಿ ಎದುರಾದ ವೈಫಲ್ಯಗಳನ್ನು ಮರೆಮಾಚಲು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಮೂಲಕ ದೇಶದ ಹಿತಾಸಕ್ತಿಗೆ ಹಾನಿ ಉಂಟಮಾಡುತ್ತಿವೆ ಎಂದರು.

ಕೇಂದ್ರ ಸರ್ಕಾರವು ತನ್ನ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಮತ್ತು ಸಮಾಜದಲ್ಲಿ ಒಡಕು ಉಂಟುಮಾಡಲು ಎಸ್‌ಐಆರ್‌ಅನ್ನು ಬಳಸುತ್ತಿದೆ
ಡೆರೆಕ್‌ ಒಬ್ರಯಾನ್, ಟಿಎಂಸಿ ರಾಜ್ಯಸಭಾ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.