
ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಸಿದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ 63.66 ಲಕ್ಷ (ಶೇ 8.3ರಷ್ಟು) ಮತದಾರರ ಹೆಸರನ್ನು ಕೈಬಿಡಲಾಗಿದ್ದು, ರಾಜ್ಯದ ಒಟ್ಟು ಮತದಾರರ ಸಂಖ್ಯೆ 7.04 ಕೋಟಿಗೆ ಇಳಿದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಸುಮಾರು 60.6 ಲಕ್ಷ ಮತದಾರರಿಗೆ ಸಂಬಂಧಿಸಿದಂತೆ ನ್ಯಾಯಾಂಗ ಅಧಿಕಾರಿಗಳಿಂದ ಪರಿಶೀಲನೆ ನಡೆಯಲಿದ್ದು, ಆ ಬಳಿಕವಷ್ಟೇ ಪಟ್ಟಿಯಲ್ಲಿ ಹೆಸರು ಅಳಿಸುವ ಮತ್ತು ಸೇರಿಸುವ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಅದು ಹೇಳಿದೆ.
‘ಎಸ್‌ಐಆರ್ ಭಾಗವಾಗಿ ನಡೆದ ಹೆಸರುಗಳನ್ನು ತೆಗೆದುಹಾಕುವುದು ಮತ್ತು ಸೇರಿಸುವ ಪ್ರಕ್ರಿಯೆ ಬಳಿಕ ಪಶ್ಚಿಮ ಬಂಗಾಳದಲ್ಲಿ 7.04 ಕೋಟಿ ಜನರು ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ’ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಎಸ್‌ಐಆರ್ ಹೆಸರಿನಲ್ಲಿ ಬಂಗಾಳಿ ಜನರ ವಿರುದ್ಧದ ದ್ವೇಷ ಮತ್ತು ಕಿರುಕುಳ ತಾರಕಕ್ಕೇರಿದೆ ಅರ್ಹ ಮತದಾರರ ಹೆಸರು ಅಳಿಸಿದರೆ ಕಾನೂನು ಹೋರಾಟ ನಡೆಸಲಾಗುವುದು.– ತನ್ಮಯ್ ಘೋಷ್, ಟಿಎಂಸಿ ನಾಯಕ
ನಮೂನೆ 7ರ ಮೂಲಕ 5.46 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಅಳಿಸಲಾಗಿದ್ದರೆ, ನಮೂನೆ 6 ಮತ್ತು 6ಎ ಪರಿಶೀಲನೆ ಮೂಲಕ 1.82 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ನವೆಂಬರ್ 4ರಿಂದ 116 ದಿನಗಳವರೆಗೆ ರಾಜ್ಯವ್ಯಾಪಿ ಎಸ್‌ಐಆರ್ ಪ್ರಕ್ರಿಯೆ ನಡೆದಿದ್ದು, ಡಿಸೆಂಬರ್ 16ರಂದು ಕರಡು ಪಟ್ಟಿ ಪ್ರಕಟಿಸಲಾಗಿತ್ತು.
‘ತೀರ್ಪು ಬಾಕಿ’:
ಪಟ್ಟಿಯಲ್ಲಿ ಸುಮಾರು 60.06 ಲಕ್ಷ ಮತದಾರರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ. ಈ ಮತದಾರರ ಭವಿಷ್ಯವನ್ನು ಮುಂಬರುವ ವಾರಗಳಲ್ಲಿ ನ್ಯಾಯಾಂಗ ಅಧಿಕಾರಿಗಳು ನಿರ್ಧರಿಸಲಿದ್ದಾರೆ. ಇದು ಮತದಾರರ ಪಟ್ಟಿಯಲ್ಲಿನ ಏರಿಳಿತಕ್ಕೆ ಕಾರಣವಾಗುವ ಸಾಧ್ಯತೆಯಿದೆ.
‘ಆಯೋಗದಿಂದ ಅನುಮೋದನೆ ಪಡೆದ ಮತದಾರರು ಪಶ್ಚಿಮ ಬಂಗಾಳದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಕ್ಕು ಚಲಾಯಿಸಲು ಅವಕಾಶ ಪಡೆಯಲಿದ್ದಾರೆ. ಮಾರ್ಚ್ ಮಧ್ಯಭಾಗದಲ್ಲಿ ಆಯೋಗವು ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ’ ಎಂದು ಮೂಲಗಳು ಹೇಳಿವೆ.
ರಾಜ್ಯದಲ್ಲಿ 2025ರ ಆಗಸ್ಟ್‌ನ ಮತದಾರರ ಪಟ್ಟಿಯಲ್ಲಿ 7.66 ಕೋಟಿ ಮತದಾರರ ಹೆಸರುಗಳಿದ್ದವು. ಆಯೋಗ ಪ್ರಕಟಿಸಿರುವ ಎಸ್‌ಐಆರ್‌ನ ಕರಡು ಪಟ್ಟಿಯಲ್ಲಿ 58 ಲಕ್ಷ ಮತದಾರರ ಹೆಸರನ್ನು ವಲಸೆ, ಸಾವು, ನಕಲು ಎಂಬ ಕಾರಣಗಳನ್ನು ನೀಡಿ ಕೈಬಿಡಲಾಗಿತ್ತು.
ತೆರೆದುಕೊಳ್ಳದ ವೆಬ್ ಪೋರ್ಟಲ್:
ಆಯೋಗವು ಶನಿವಾರ ಹಂತ ಹಂತವಾಗಿ ಆಫ್‌ಲೈನ್ ವಿಧಾನದಲ್ಲಿ ಪಟ್ಟಿ ಪ್ರಕಟಿಸಿದೆ. ಈ ಪಟ್ಟಿಯ ಪ್ರತಿಗಳನ್ನು ಜಿಲ್ಲೆಗಳ ಎಸ್‌ಡಿಒ ಮತ್ತು ಬಿಡಿಒ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ. ಆದರೆ ಈ ಕುರಿತು ಕ್ರೋಡೀಕೃತ ಪಟ್ಟಿಯ ‘ಸಾಫ್ಟ್’ ಪ್ರತಿಗಳು ಲಭ್ಯವಾಗಿಲ್ಲ. ಆಯೋಗದ ವೆಬ್‌ಸೈಟ್, ಪೋರ್ಟಲ್, ಮೊಬೈಲ್ ಅಪ್ಲಿಕೇಷನ್‌ಗಳು ತೆರೆದುಕೊಳ್ಳದ ಕಾರಣ ಮಾಹಿತಿ ಪಡೆಯಲು ಮತದಾರರು, ರಾಜಕೀಯ ಪಕ್ಷಗಳ ಕಾರ್ಯಕರ್ತರು ಹೆಣಗಾಡಿದರು.
ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಹೆಚ್ಚಿನ ಸಂಖ್ಯೆಯ ಜನರು ಎಸ್‌ಡಿಒ ಮತ್ತು ಬಿಡಿಒ ಕಚೇರಿಗಳಿಗೆ ಭೇಟಿ ನೀಡಿದರು. ಜನದಟ್ಟಣೆ ಹೆಚ್ಚಾದ ಕಾರಣ ಹಲವೆಡೆ ಉದ್ದನೆಯ ಸಾಲುಗಳು ಕಂಡುಬಂದವು.
‘ತಾಂತ್ರಿಕ ಕಾರಣದಿಂದ ವೆಬ್ ಪೋರ್ಟಲ್ ನಿಷ್ಕ್ರಿಯವಾಗಿತ್ತು. ಹೀಗಾಗಿ ಮತದಾರರಲ್ಲಿ ಗೊಂದಲ ಉಂಟಾಯಿತು’ ಎಂದು ಮೂಲಗಳು ತಿಳಿಸಿವೆ. ಆದರೆ ತಾಂತ್ರಿಕ ದೋಷದ ಕುರಿತು ಆಯೋಗದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.
ನಾದಿಯಾ, ಉತ್ತರ ಕೋಲ್ಕತ್ತ ಹೂಗ್ಲಿಯಲ್ಲಿ ಭಾರಿ ಕಡಿತ
ಬಾಂಗ್ಲಾದೇಶದ ಗಡಿಯಲ್ಲಿರುವ ನಾದಿಯಾ ಜಿಲ್ಲೆಯಲ್ಲಿ ಸುಮಾರು 2.73 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಎಸ್‌ಐಆರ್ ಆರಂಭಕ್ಕೂ ಮುನ್ನ ಜಿಲ್ಲೆಯಲ್ಲಿ 44.18 ಲಕ್ಷ ಇದ್ದ ಮತದಾರರ ಸಂಖ್ಯೆ ಎಸ್‌ಐಆರ್‌ನ ಕರಡು ಪಟ್ಟಿಯಲ್ಲಿ 42.02 ಲಕ್ಷಕ್ಕೆ ಕುಸಿದಿತ್ತು. ಅದೀಗ 41.45 ಲಕ್ಷಕ್ಕೆ ಇಳಿದಿದೆ.
ಉತ್ತರ ಕೋಲ್ಕತ್ತ ವಲಯದಲ್ಲಿ 4.07 ಲಕ್ಷ ಮತದಾರರ ಹೆಸರನ್ನು ಅಳಿಸಲಾಗಿದೆ. ಇವುಗಳಲ್ಲಿ 3.90 ಲಕ್ಷ ಹೆಸರುಗಳನ್ನು ಕರಡು ಹಂತದಲ್ಲಿ ಇನ್ನೂ 17000 ಹೆಸರುಗಳನ್ನು ಅಂತಿಮ ಹಂತದಲ್ಲಿ ತೆಗೆದುಹಾಕಲಾಗಿದೆ.
ಬಂಕುರಾ ಜಿಲ್ಲೆಯಲ್ಲಿ 1.18 ಲಕ್ಷ ಉತ್ತರ ಬಂಗಾಳದ ಅಲಿಪುರ್ದೂರ್‌ನಲ್ಲಿ 1.02 ಲಕ್ಷ ಮತದಾರರ ಹೆಸರನ್ನು ಕೈಬಿಡಲಾಗಿದೆ. ಹೂಗ್ಲಿಯ ಮತದಾರರ ಪಟ್ಟಿಯಿಂದ 3.34 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಇಲ್ಲಿನ 1.73 ಲಕ್ಷ ಮತದಾರರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ.
ಎಸ್‌ಐಆರ್‌ನ ಅಂತಿಮ ಪಟ್ಟಿ ಆಧರಿಸಿ ರಾಜಕೀಯ ಪಕ್ಷಗಳು ಬೂತ್ ಮಟ್ಟದಲ್ಲಿ ಪರಿಶೀಲನಾ ಕಾರ್ಯವನ್ನು ಈಗಾಗಲೇ ಆರಂಭಿಸಿವೆ. ವಿವಿಧ ಪಕ್ಷಗಳ ಕಾರ್ಯಕರ್ತರು ಪಟ್ಟಿಗಳನ್ನು ಪಡೆದು ಮತದಾರರ ಹೆಸರುಗಳ ಪರಿಶೀಲಿಸುತ್ತಿದ್ದು ಕೆಲ ಮೇಲ್ಮನವಿಗಳಿಗೂ ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಭವಾನಿಪುರ: 47000 ಮತದಾರರು ಹೊರಕ್ಕೆ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಸುವ ಕ್ಷೇತ್ರವಾದ ಭವಾನಿಪುರದಲ್ಲಿ ಒಟ್ಟು 47000 ಮತದಾರರ ಹೆಸರನ್ನು ತೆಗೆಯಲಾಗಿದೆ. ಅಲ್ಲದೆ 14000ಕ್ಕೂ ಹೆಚ್ಚು ಮತದಾರರ ಹೆಸರನ್ನು ‘ತೀರ್ಪು ಬಾಕಿ’ ಎಂದು ಗುರುತಿಸಲಾಗಿದೆ.
ಭವಾನಿಪುರ ಕ್ಷೇತ್ರದಲ್ಲಿ 2025ರ ನವೆಂಬರ್ 4ರಂದು 206295 ಮತದಾರರಿದ್ದರು. ಎಸ್‌ಐಆರ್‌ನ ಕರಡು ಪಟ್ಟಿ ಪ್ರಕಟವಾದಾಗ 44786 ಮತದಾರರ ಹೆಸರನ್ನು ಅಳಿಸಲಾಗಿತ್ತು. ಶನಿವಾರ ಪ್ರಕಟಗೊಂಡಿರುವ ಅಂತಿಮ ಪಟ್ಟಿಯಲ್ಲಿ ಹೆಚ್ಚುವರಿಯಾಗಿ 2324 ಹೆಸರುಗಳನ್ನು ಕೈಬಿಡಲಾಗಿದೆ.
2021ರಲ್ಲಿ ಭವಾನಿಪುರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ 58000ಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದರು. ಈಗ ಈ ಕ್ಷೇತ್ರದಲ್ಲಿ ಕೈಬಿಟ್ಟಿರುವ ಮತದಾರರ ಸಂಖ್ಯೆಯೇ 47000 ದಾಟಿದೆ.
ತಮಿಳುನಾಡು: 1.18 ಕೋಟಿ ಯುವ ಮತದಾರರು
ತಮಿಳುನಾಡಿನಲ್ಲಿ ಸುಮಾರು 1.18 ಕೋಟಿ ಯುವ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಯುವ ಜನರನ್ನು ನೋಂದಾಯಿಸಲು 3060 ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನಲ್ಲಿ ಮುಂಬರಲಿರುವ ವಿಧಾನಸಭಾ ಚುನಾವಣಾ ಸಿದ್ಧತೆಗಳ ಕುರಿತು ಫೆ. 26 ಮತ್ತು 27ರಂದು ಪರಿಶೀಲನಾ ಸಭೆ ನಡೆಯಿತು. ಅದರ ಬಳಿಕ ಆಯೋಗವು ಈ ಮಾಹಿತಿಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದೆ.
ಯುವ ಮತದಾರರ ಹೆಸರು ಸೇರ್ಪಡೆಗೆ ಕಾಲೇಜುಗಳಲ್ಲಿ ಅಭಿಯಾನಗಳನ್ನು ನಡೆಸಲು ಆಯೋಗ ಈ ಅಧಿಕಾರಿಗಳಿಗೆ ತಿಳಿಸಿದೆ.
ಫೆಬ್ರುವರಿ 23ರಂದು ಆಯೋಗ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ದಾಖಲಾಗಿದೆ. ಅಂದರೆ 18ರಿಂದ 19ರ ವಯಸ್ಸಿನ 12.51 ಲಕ್ಷ (ಮೊದಲ ಬಾರಿಗೆ ಮತಚಲಾಯಿಸುವವರು) ಮತ್ತು 20ರಿಂದ 29 ವಯಸ್ಸಿನ 1.05 ಕೋಟಿ ಮತದಾರರಿದ್ದಾರೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.