ADVERTISEMENT

ಪಶ್ಚಿಮ ಬಂಗಾಳದ 34 ವಿಧಾನಸಭಾ ಕ್ಷೇತ್ರಗಳಿಗೆ ಏಳನೇ ಹಂತದ ಮತದಾನ ಆರಂಭ

ಏಜೆನ್ಸೀಸ್
Published 26 ಏಪ್ರಿಲ್ 2021, 3:13 IST
Last Updated 26 ಏಪ್ರಿಲ್ 2021, 3:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೋಲ್ಕತ್ತ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವ ಮಧ್ಯೆ, ಪಶ್ಚಿಮ ಬಂಗಾಳದ ಐದು ಜಿಲ್ಲೆಗಳ 34 ಕ್ಷೇತ್ರಗಳಲ್ಲಿ 7ನೇ ಹಂತದ ವಿಧಾನಸಭಾ ಚುನಾವಣೆಯ ಮತದಾನ ಸೋಮವಾರ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಯಿತು.

ಪಶ್ಚಿಮ ಬಂಗಾಳ ಚುನಾವಣೆಯ ಈ ಹಂತದಲ್ಲಿ 37 ಮಹಿಳೆಯರು ಸೇರಿದಂತೆ ಒಟ್ಟು 268 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳನೇ ಹಂತವು ದಕ್ಷಿಣ ದಿನಾಜ್‌ಪುರದ ಆರು, ಮಾಲ್ಡಾದಲ್ಲಿ ಆರು, ಮುರ್ಷಿದಾಬಾದ್‌ನಲ್ಲಿ ಒಂಬತ್ತು, ಪಶ್ಚಿಮ ಬರ್ಧಮಾನ್‌ನಲ್ಲಿ ಒಂಭತ್ತು ಮತ್ತು ಕೋಲ್ಕತ್ತಾದ ನಾಲ್ಕು ಕ್ಷೇತ್ರಗಳಲ್ಲಿ ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿದೆ.

39.87 ಲಕ್ಷ ಮಹಿಳೆಯರು ಮತ್ತು 221 ತೃತೀಯ ಲಿಂಗಿಗಳು ಸೇರಿದಂತೆ 81.88 ಲಕ್ಷಕ್ಕೂ ಹೆಚ್ಚು ಮತದಾರರು 11,376 ಮತಗಟ್ಟೆಗಳಲ್ಲಿ ಮತ ಚಲಾಯಿಸಲಿದ್ದಾರೆ.

ADVERTISEMENT

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಭಾನುವಾರ 81,375 ಸಕ್ರಿಯ ಕೋವಿಡ್ 19 ಪ್ರಕರಣಗಳಿವೆ. ರಾಜ್ಯದಲ್ಲಿ ಮಾರಕ ವೈರಸ್‌ನಿಂದಾಗಿ 10,884 ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಏಳನೇ ಹಂತದ ಮತದಾನದಲ್ಲಿ ಸಿಲಿಗುರಿ ಕ್ಷೇತ್ರದಿಂದ ಸಿಪಿಐ(ಎಂ)ನ ಅಶೋಕ್ ಭಟ್ಟಾಚಾರ್ಯ ಬಿಜೆಪಿ ಅಭ್ಯರ್ಥಿ ಶಂಕರ್ ಘೋಷ್ ಮತ್ತು ಟಿಎಂಸಿಯ ಒಂಪ್ರಕಾಶ್ ಮಿಶ್ರಾ ವಿರುದ್ಧ ಪ್ರಮುಖ ಸ್ಪರ್ಧಿಯಾಗಿದ್ದಾರೆ. ಸಿಲಿಗುರಿಯ ಮಾಜಿ ಮೇಯರ್ ಭಟ್ಟಾಚಾರ್ಯ ಅವರು ಉತ್ತರ ಬಂಗಾಳದ ಪ್ರಮುಖ ಕಮ್ಯುನಿಸ್ಟ್ ನಾಯಕರಾಗಿದ್ದಾರೆ.

ಟಿಎಂಸಿಯ ಹಿರಿಯ ಮುಖಂಡ ಮತ್ತು ರಾಜ್ಯ ಸರ್ಕಾರದ ಸಚಿವ ಬ್ರಾತ್ಯ ಬಸು ಅವರು ದಮ್ ದಮ್ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರೆ, ಸಿಪಿಐ(ಎಂ) ಪಲಾಶ್ ದಾಸ್ ಅವರನ್ನು ಮತ್ತು ಬಿಜೆಪಿ ಬಿಮಲ್ ಶಂಕರ್ ನಂದಾ ಅವರನ್ನು ಆ ಕ್ಷೇತ್ರದಿಂದ ಕಣಕ್ಕಿಳಿಸಿದೆ.

ನಟ ಚಿರಂಜೀತ್ ಚಕ್ರವರ್ತಿ ಅವರು ಟಿಎಂಸಿ ಅಭ್ಯರ್ಥಿಯಾಗಿ ಬಾರಾಸತ್‌ನಿಂದ ಬಿಜೆಪಿ ಅಭ್ಯರ್ಥಿ ಶಂಕರ್ ಚಟರ್ಜಿ ಮತ್ತು ಫಾರ್ವರ್ಡ್ ಬ್ಲಾಕ್ ಅಭ್ಯರ್ಥಿ ಸಂಜಿಬ್ ಚಟ್ಟೋಪಾಧ್ಯಾಯ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.