ನವದೆಹಲಿ: ಪಾಕಿಸ್ತಾನ ಸೇನೆಯ ವಶದಲ್ಲಿರುವ ಬಿಎಸ್ಎಫ್ ಯೋಧ ಪೂರ್ಣಂ ಸಾಹು ಸುರಕ್ಷಿತ ವಾಪಸಾತಿಗೆ ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಮಂಗಳವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಆಕಸ್ಮಿಕವಾಗಿ ಪಾಕಿಸ್ತಾನದ ಗಡಿ ಪ್ರವೇಶಿಸಿದ್ದ ಸಾಹು ಅವರನ್ನು ಏ.23 ರಂದು ಪಂಜಾಬ್‌ನ ಫಿರೋಜ್‌ಪುರದ ಕೃಷಿ ಭೂಮಿಯಿಂದ ಪಾಕಿಸ್ತಾನದ ರೇಂಜರ್ಸ್ ಸೈನಿಕರು ಬಂಧಿಸಿ ಕರೆದೊಯ್ದಿದ್ದಾರೆ.
‘ಸಾಹು ಅವರನ್ನು ಪಾಕಿಸ್ತಾನ ಸೇನೆ ಬಂಧಿಸಿ ಆರು ದಿನಗಳು ಕಳೆದಿವೆ. ಅವರ ಕುಟುಂಬವು ಆತಂಕದಿಂದ ಉತ್ತರಕ್ಕಾಗಿ ಕಾಯುತ್ತಿದೆ. ಸುರಕ್ಷಿತವಾಗಿ ಕರೆತರಲು ಸರ್ಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ’ ಎಂದು ಕಾಂಗ್ರೆಸ್ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಎಸ್ಎಫ್ ಅಧಿಕಾರಿಗಳ ಪ್ರಕಾರ, ಗಡಿಯ ಬಳಿ ರೈತರಿಗೆ ಬೆಂಗಾವಲು ನೀಡುತ್ತಿದ್ದ ಸಾಹು, ಬಿಸಿಲಿನ ಕಾರಣಕ್ಕೆ ಮರದ ಕೆಳಗೆ ವಿಶ್ರಾಂತಿ ಪಡೆಯಲು ಹೋಗಿ ತಿಳಿಯದೆ ಪಾಕಿಸ್ತಾನದ ಗಡಿ ಪ್ರವೇಶಿಸಿದ್ದರು. ಸಾಹು ಅವರನ್ನು ಫಿರೋಜ್‌ಪುರದ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.
ಸಾಹು ಬಿಡುಗಡೆಗಾಗಿ ಮಾತುಕತೆ ನಡೆಸಲು ಭಾರತ ಮತ್ತು ಪಾಕಿಸ್ತಾನದ ಗಡಿ ಭದ್ರತಾ ಪಡೆಗಳು ಫ್ಲ್ಯಾಗ್ ಮೀಟಿಂಗ್ ನಡೆಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸಾಹು ಕುಟುಂಬಕ್ಕೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು 26 ಜನರನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿರುವ ಕಾರಣದಿಂದ ಉಭಯ ದೇಶಗಳ ನಡುವಿನ ಸಂಬಂಧ ಬಿಗಡಾಯಿಸಿರುವಾಗಲೇ ಈ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.