ADVERTISEMENT

ಬಳಕೆದಾರರಿಗೆ WhatsApp ಖಾಸಗೀತನ ನೀತಿ ಒಪ್ಪಲೇಬೇಕಾದ ಸ್ಥಿತಿ: ದೆಹಲಿ ಕೋರ್ಟ್

ಪಿಟಿಐ
Published 26 ಆಗಸ್ಟ್ 2022, 16:14 IST
Last Updated 26 ಆಗಸ್ಟ್ 2022, 16:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾಟ್ಸ್ಆ್ಯಪ್‌ 2021ರ ಖಾಸಗೀತನ ನೀತಿಯು ಬಳಕೆದಾರರಿಗೆ ‘ಬಳಸಿ ಇಲ್ಲವೆ, ಕೈಬಿಡಿ’ ಎಂಬ ಪರಿಸ್ಥಿತಿ ನಿರ್ಮಾಣ ಮಾಡಿದೆ ಎಂದು ದೆಹಲಿ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮಾತೃ ಸಂಸ್ಥೆ ಫೇಸ್‌ಬುಕ್‌ ಜೊತೆಗೆ ಸೂಕ್ಷ್ಮ, ಖಾಸಗಿ ದತ್ತಾಂಶವನ್ನು ಹಂಚಿಕೊಳ್ಳುವುದರ ಕುರಿತಂತೆ ಹೊಸ ನೀತಿಯಡಿ ಬಳಕೆದಾರರಿಗೆ ಸೀಮಿತ ಆಯ್ಕೆಯನ್ನು ನೀಡಿದ್ದು, ಸಮ್ಮತಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಸಿದೆ ಎಂದು ಹೇಳಿದೆ.

ವಾಟ್ಸ್ಆ್ಯಪ್‌ನ ಖಾಸಗೀತನ ನೀತಿ 2021 ಕುರಿತು ತನಿಖೆಗೆ ಭಾರತೀಯ ಸ್ಪರ್ಧಾತ್ಮಕ ಆಯೋಗ (ಸಿಸಿಐ) ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ADVERTISEMENT

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾಯಮೂರ್ತಿ ಸುಬ್ರಹ್ಮಣಿಯಂ ಪ್ರಸಾದ್‌ ಅವರಿದ್ದ ಪೀಠವು, ಏಪ್ರಿಲ್‌ 22, 2021ರಂದು ಏಕಸದಸ್ಯ ಪೀಠ ನೀಡಿದ್ದ ಆದೇಶವು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟಿತು.

ಈ ಕುರಿತು ಆದೇಶವನ್ನು ನ್ಯಾಯಪೀಠ ಗುರುವಾರವೇ ನೀಡಿದೆ. ಆದರೆ, ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಶುಕ್ರವಾರ ಅಪ್‌ಲೋಡ್‌ ಮಾಡಲಾಗಿದೆ.

ಏಕಸದಸ್ಯ ಪೀಠವು ಕಳೆದ ಏಪ್ರಿಲ್‌ನಲ್ಲಿ ನೀಡಿದ್ದ ಆದೇಶದಲ್ಲಿ, ಸಿಸಿಐ ಆದೇಶ ಕುರಿತಂತೆ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಖಾಸಗೀತನ ನೀತಿ ಕುರಿತಂತೆ ಪತ್ರಿಕಾ ವರದಿ ಆಧರಿಸಿ ಸಿಸಿಐ ಸ್ವಯಂಪ್ರೇರಿತವಾಗಿ ತನಿಖೆ ನಡೆಸಲು ಏಪ್ರಿಲ್‌ನಲ್ಲಿ ಮುಂದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.