ಮನಮೋಹನ ಸಿಂಗ್
ನವದೆಹಲಿ: ಮನಮೋಹನ ಸಿಂಗ್ ಅವರು ತಾವು ಬಯಸಿದ ಕಾರ್ಯವನ್ನು ಸಾಧಿಸಲು ವೃತ್ತಿ ಜೀವನದ ವಿವಿಧ ಘಟ್ಟಗಳಲ್ಲಿ ಒಟ್ಟು ಏಳು ಸಲ ರಾಜೀನಾಮೆ ‘ಅಸ್ತ್ರ’ವನ್ನು ಬಳಸಿದ್ದಾರೆ.
ಪ್ರಧಾನ ಮಂತ್ರಿಗಳಾಗಿದ್ದ ರಾಜೀವ್ ಗಾಂಧಿ ಮತ್ತು ಪಿ.ವಿ.ನರಸಿಂಹ ರಾವ್ ಹಾಗೂ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ ಅವರೂ ಸಿಂಗ್ ಅವರ ಈ ‘ರಾಜೀನಾಮೆ ಬೆದರಿಕೆ’ಯನ್ನು ಎದುರಿಸಿದ್ದಾರೆ. ಆದರೂ ಸಿಂಗ್ ಅವರನ್ನು ಈ ಮೂವರೂ ಕೈಬಿಡಲಿಲ್ಲ.
ಅವರ ಮೊದಲ ರಾಜೀನಾಮೆ ಬೆದರಿಕೆ ಹಣಕಾಸು ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿದ್ದಾಗ 1971ರಲ್ಲಿ ಬಂದಿತ್ತು. ಅಂದು ಸಚಿವರಾಗಿದ್ದ ಎಲ್.ಎನ್. ಮಿಶ್ರಾ ಅವರು ಸಂಪುಟದ ಟಿಪ್ಪಣಿಯೊಂದಕ್ಕೆ ಸಂಬಂಧಿಸಿದಂತೆ ಸಿಂಗ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಅಸಮಾಧಾನಗೊಂಡ ಸಿಂಗ್, ರಾಜೀನಾಮೆ ನೀಡಲು ಮುಂದಾಗಿದ್ದರು.
ಆದರೆ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಕಾರ್ಯದರ್ಶಿಯಾಗಿದ್ದ ಪಿ.ಎನ್.ಹಕ್ಸರ್ ಅವರು ಮುಖ್ಯ ಆರ್ಥಿಕ ಸಲಹೆಗಾರನ ಹುದ್ದೆ ನೀಡುವ ಮೂಲಕ ಸಿಂಗ್ ಅವರನ್ನು ಅಲ್ಲೇ ಉಳಿಸಿಕೊಂಡರು. ಮನಮೋಹನ್ ಅವರ ಪುತ್ರಿ ದಮನ್ ಸಿಂಗ್ ತಮ್ಮ ‘ಸ್ಟ್ರಿಕ್ಟ್ಲಿ ಪರ್ಸನಲ್: ಮನಮೋಹನ ಆ್ಯಂಡ್ ಗುರುಶರಣ್’ ಪುಸ್ತಕದಲ್ಲಿ ಇದನ್ನು ಬರೆದುಕೊಂಡಿದ್ದಾರೆ.
1980ರಲ್ಲಿ ಸಿಂಗ್ ಅವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜೀವ್ ಗಾಂಧಿ ಅವರು ‘ಯೋಜನಾ ಆಯೋಗದಲ್ಲಿರುವವರು ಜೋಕರ್‌ಗಳ ಗುಂಪು’ ಎಂದು ಹೇಳಿದ್ದರು. ಇದರಿಂದ ತುಂಬಾ ನೊಂದುಕೊಂಡಿದ್ದ ಸಿಂಗ್, ರಾಜೀನಾಮೆಗೆ ಮುಂದಾಗಿದ್ದರು.
ತಾವು ಹಣಕಾಸು ಸಚಿವರಾಗಿದ್ದಾಗ ಹರ್ಷದ್ ಮೆಹ್ತಾ ಷೇರು ಹಗರಣ ಕೇಳಿಬಂದಾಗ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಅಂದು ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾವ್ ಅವರು ರಾಜೀನಾಮೆಯನ್ನು ಅಂಗೀಕರಿಸಲಿಲ್ಲ. ಈ ಘಟನೆಯನ್ನು ಸ್ವತಃ ಸಿಂಗ್ ಅವರೇ 2016ರಲ್ಲಿ ನೆನಪಿಸಿಕೊಂಡಿದ್ದರು.
ಸೋನಿಯಾ ಗಾಂಧಿ ಅವರು ಮೂರು ಸಂದರ್ಭಗಳಲ್ಲಿ ಸಿಂಗ್ ಅವರಿಂದ ರಾಜೀನಾಮೆ ಬೆದರಿಕೆ ಎದುರಿಸಿದ್ದಾರೆ. 2005ರಲ್ಲಿ ಭಾರತ– ಅಮೆರಿಕ ಜಂಟಿ ಸಮರಾಭ್ಯಾಸವನ್ನು ಎಡಪಕ್ಷಗಳು ವಿರೋಧಿಸಿದಾಗ ಮತ್ತು ಭಾರತ– ಅಮೆರಿಕ ಅಣು ಒಪ್ಪಂದದ ವಿಚಾರದಲ್ಲಿ ಎಡಪಕ್ಷಗಳು 2007 ಹಾಗೂ 2008ರಲ್ಲಿ ಅಪಸ್ವರ ಎತ್ತಿದಾಗಲೂ ಅವರು ರಾಜೀನಾಮೆಗೆ ಮುಂದಾಗಿದ್ದರು. ಆದರೆ ಈ ಮೂರೂ ಸಂದರ್ಭಗಳಲ್ಲಿ ಅವರ ಮನವೊಲಿಸುವಲ್ಲಿ ಸೋನಿಯಾ ಯಶಸ್ವಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.