ADVERTISEMENT

ಗುಜರಾತ್: ಮದ್ಯ ಮಾಫಿಯಾಗಳಿಗೆ ಯಾವ ಆಡಳಿತ ಶಕ್ತಿಗಳು ರಕ್ಷಣೆ ನೀಡುತ್ತಿವೆ: ರಾಹುಲ್

ಪಿಟಿಐ
Published 29 ಜುಲೈ 2022, 7:39 IST
Last Updated 29 ಜುಲೈ 2022, 7:39 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ನವದೆಹಲಿ: ಗುಜರಾತ್‌ನಲ್ಲಿ ನಕಲಿ ಮದ್ಯ ಸೇವನೆ ಹಾಗೂ ಮಾದಕ ವ್ಯಸನದ ಬಗ್ಗೆ ಅತೀವ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಈ ಮಾಫಿಯಾಗಳಿಗೆ ಯಾವ ಆಡಳಿತ ಶಕ್ತಿಗಳು ರಕ್ಷಣೆ ನೀಡುತ್ತಿವೆ ಎಂದು ಶುಕ್ರವಾರ ಪ್ರಶ್ನಿಸಿದ್ದಾರೆ.

ಗುಜರಾತ್‌ನಲ್ಲಿ ನಕಲಿ ಮದ್ಯ ದುರಂತ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಜುಲೈ 25ರಂದು ಬೊಟಾಡ ಹಾಗೂ ಅಹಮದಾಬಾದ್ ಜಿಲ್ಲೆಗಳಲ್ಲಿ ನಕಲಿ ಮದ್ಯ ಸೇವಿಸಿ 42 ಜನರು ಮೃತಪಟ್ಟಿದ್ದಾರೆ. ಅಲ್ಲದೆ 97 ಜನರು ಭಾವನಗರ, ಬೊಟಾಡ ಹಾಗೂ ಅಹಮದಾಬಾದ್‌ನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಗುಜರಾತ್‌ನ ಗೃಹ ಸಚಿವ ಹರ್ಷ ಸಂಘವಿ ತಿಳಿಸಿದ್ದರು.

ಮದ್ಯ ನಿಷೇಧಿತ ಗುಜರಾತ್‌ನಲ್ಲಿ ನಕಲಿ ಮದ್ಯ ಸೇವನೆಯಿಂದ ಹಲವು ಕುಟುಂಬಗಳು ಅನಾಥವಾಗಿದೆ. ಕೋಟ್ಯಂತರ ಮೌಲ್ಯದ ಡ್ರಗ್ಸ್ ಕೂಡ ನಿರಂತರವಾಗಿ ವಶಕ್ಕೆ ಪಡೆಯಲಾಗುತ್ತಿದೆ ಎಂದು ರಾಹುಲ್ ಟ್ವೀಟಿಸಿದ್ದಾರೆ.

ಬಾಪೂಜಿ ಹಾಗೂ ಸರ್ದಾರ್ ಅವರ ಭೂಮಿಯಲ್ಲಿ ಇದು ಅತ್ಯಂತ ಕಳವಳಕಾರಿ ವಿಷಯವಾಗಿದ್ದು, ನಕಲಿ ಮದ್ಯದ ವ್ಯವಹಾರ ಮಾಡುತ್ತಿರುವುದು ಯಾರು? ಯಾವ ಆಡಳಿತ ಶಕ್ತಿಗಳು ಇಂತಹ ಮಾಫಿಯಾಗಳಿಗೆ ರಕ್ಷಣೆ ನೀಡುತ್ತಿವೆ ಎಂದು ಪ್ರಶ್ನಿಸಿದ್ದಾರೆ.

ಈ ಪ್ರಕರಣದಲ್ಲಿ 15 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.