ಕೆಮ್ಮಿನ ಸಿರಪ್
ಪಿಟಿಐ ಚಿತ್ರ
ನವದೆಹಲಿ: ‘ಭಾರತದಲ್ಲಿ ಮಕ್ಕಳ ಸರಣಿ ಸಾವಿಗೆ ಕಾರಣವಾಗಿದೆ ಎನ್ನಲಾದ ಕೆಮ್ಮಿನ ಸಿರಪ್ ಅನ್ನು ಬೇರೆ ರಾಷ್ಟ್ರಗಳಿಗೂ ರಫ್ತು ಮಾಡಲಾಗಿದೆಯೇ’ ಎಂದು ಭಾರತದ ಅಧಿಕಾರಿಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಕೇಳಿದೆ.
ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್‌ರಿಫ್ ಸಿರಪ್ ಕುರಿತು ಅಧಿಕಾರಿಗಳಿಂದ ಖಚಿತ ಮಾಹಿತಿ ಲಭ್ಯವಾದ ನಂತರ ‘ಜಾಗತಿಕ ವೈದ್ಯಕೀಯ ಉತ್ಪನ್ನಗಳ ಎಚ್ಚರಿಕೆ’ಯ ಸುತ್ತೋಲೆಯನ್ನು ಹೊರಡಿಸಲಾಗುವುದು ಎಂದು ಡಬ್ಲ್ಯೂಎಚ್‌ಒ ಅಧಿಕಾರಿಗಳು ಹೇಳಿದ್ದಾರೆ. ಕಲಬೆರಕೆ ಮತ್ತು ಕಳಪೆ ಗುಣಮಟ್ಟದ ಔಷಧಗಳಿಗೆ ಮಾತ್ರ ಇಂಥ ಎಚ್ಚರಿಕೆಯ ಸುತ್ತೋಲೆಯನ್ನು ಹೊರಡಿಸಲಾಗುತ್ತದೆ.
ವಿಷಕಾರಿ ದ್ರಾವಣವಾದ ಡೈಎಥಿಲಿನ್ ಗ್ಲೈಕಾಲ್ (ಡಿಇಜಿ) ಮತ್ತು ಇಥಲಿನ್ ಗ್ಲೈಕಾಲ್ (ಇಜಿ) ಇರುವ ಸಿರಪ್ ಸೇವಿಸಿದ 20 ಮಕ್ಕಳು ಮೂತ್ರಪಿಂಡ ಸೋಂಕಿನಿಂದ ಮೃತಪಟ್ಟಿವೆ. ಮಧ್ಯಪ್ರದೇಶದಲ್ಲಿ ಐದು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ. ರಾಜಸ್ಥಾನದಲ್ಲಿ ಮೂವರು ಮಕ್ಕಳು ಅಸುನೀಗಿದ್ದು, ಕೆಲ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ವರದಿಯಾಗಿದೆ.
ವಿಷ ದ್ರಾವಣವಿರುವ ಸಿರಪ್ ಸೇವಿಸಿದ್ದರಿಂದ ಸಂಭವಿಸಿರುವ ಮಕ್ಕಳ ಸರಣಿ ಸಾವಿನ ಹಿನ್ನೆಲೆಯಲ್ಲಿ, ಮಾರುಕಟ್ಟೆಗೆ ಯಾವುದೇ ಔಷಧ ಬಿಡುಗಡೆಗೂ ಮುನ್ನ ಅವುಗಳಲ್ಲಿರುವ ಕಚ್ಚಾ ಸಾಮಗ್ರಿಗಳ ಪರೀಕ್ಷೆ ನಡೆಸಿ, ಅವುಗಳು ಸುರಕ್ಷಿತ ಎಂದು ಖಾತ್ರಿಯಾದ ನಂತರವೇ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಭಾರತೀಯ ಔಷಧ ನಿಯಂತ್ರಕ (DCGI) ಮಾರ್ಗಸೂಚಿ ಪ್ರಕಟಿಸಿದೆ.
‘ಕೆಲ ತಯಾರಿಕಾ ಘಟಕದಲ್ಲಿ ಇತ್ತೀಚಿಗೆ ನಡೆಸಿದ ತಪಾಸಣೆ ಸಂದರ್ಭದಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಹಲವು ಔಷಧಗಳು ಪತ್ತೆಯಾಗಿದ್ದವು. ಕೆಲ ತಯಾರಕರು ಪ್ರತಿಯೊಂದು ಬ್ಯಾಚ್‌ನ ಔಷಧವನ್ನು ತಪಾಸಣೆಗೆ ಒಳಪಡಿಸುವ ಪರಿಪಾಟವನ್ನು ನಡೆಸುತ್ತಿಲ್ಲ. ಬಳಕೆಗೂ ಮೊದಲು ನಿಗದಿತ ಮಾನದಂಡ ಅನುಸರಿಸುತ್ತಿಲ್ಲ. ನಿರ್ದಿಷ್ಟ ಹಾಗೂ ಸಕ್ರಿಯ ಪದಾರ್ಥಗಳ ತಪಾಸಣೆಯನ್ನೂ ನಡೆಸುತ್ತಿಲ್ಲ’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
‘ಕಲುಷಿತ’ಗೊಂಡಿದ್ದ ಕೆಮ್ಮಿನ ಸಿರಪ್ ತಯಾರಿಸಿದ ಶ್ರೇಸನ್ ಫಾರ್ಮಾಸ್ಯುಟಿಕಲ್ಸ್ ಕಾರ್ಖಾನೆಗೆ ಬೀಗ ಹಾಕಿರುವ ತಮಿಳುನಾಡು ಸರ್ಕಾರ, ಕಂಪನಿಯ ಇಬ್ಬರಿಗೆ ಶೋಕಾಸ್ ನೋಟಿಸ್ ನೀಡಿದೆ. ಚೆನ್ನೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಳಿ, ಕಾಂಚಿಪುರಂ ಜಿಲ್ಲೆಯ ಸುಂಗುವರಚತ್ರಂನಲ್ಲಿರುವ ಕಂಪನಿಯ ಕಾರ್ಖಾನೆಗೆ ಮಂಗಳವಾರ ಸಂಜೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಬೀಗ ಜಡಿದಿದ್ದಾರೆ.
ಕಂಪನಿಯ ಮಾಲೀಕ ಡಾ.ಜಿ.ರಂಗನಾಥನ್ ಹಾಗೂ ಅನಲಿಟಿಕಲ್ ಕೆಮಿಸ್ಟ್ ಕೆ.ಮಹೇಶ್ವರಿ ಅವರಿಗೆ ನೋಟಿಸ್ ನೀಡಲಾಗಿದೆ. ಕಂಪನಿ ಉತ್ಪಾದಿಸುವ ಸಿರಪ್‌ನಲ್ಲಿ ವಿಷಕಾರಿ ದ್ರಾವಣ ಡೈಎಥಿಲಿನ್ ಗ್ಲೈಕಾಲ್ (ಡಿಇಜಿ) ಪ್ರಮಾಣ ಶೇ 48.6ರಷ್ಟು ಇರುವುದು ಪರೀಕ್ಷೆಯಿಂದ ಕಂಡುಬಂದಿರುವ ಹಿನ್ನೆಲೆಯಲ್ಲಿ ಈ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಮೂಲಗಳು ಹೇಳಿವೆ.
ಎಷ್ಟು ಪ್ರಮಾಣದ ಸಿರಪ್ ತಯಾರಿಸಲಾಗಿದೆ, ಸಿರಪ್ ವಿತರಣೆಗೆ ಸಂಬಂಧಿಸಿದ ದಾಖಲೆಗಳು, ಪ್ರತಿ ಬ್ಯಾಚ್ ಔಷಧಿಯ ಪ್ಯಾಕೇಜಿಂಗ್‌ಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.
‘ಕಂಪನಿಯು ಮಾರುಕಟ್ಟೆಯಿಂದ ಈ ಕೆಮ್ಮಿನ ಸಿರಪ್ ವಾಪಸು ತರಿಸಿಕೊಳ್ಳಬೇಕು ಹಾಗೂ ಹೀಗೆ ಮರಳಿ ತರಿಸಿಕೊಳ್ಳಲಾದ ಸರಕಿನ ಕುರಿತ ವಿವರಗಳನ್ನು ಸಹ ಒದಗಿಸಬೇಕು’ ಎಂದೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.