ADVERTISEMENT

ಇಸ್ರೊ ಹೊಸ ಅಧ್ಯಕ್ಷರಾಗಿ ವಿ. ನಾರಾಯಣನ್: ಅವರ ಪರಿಚಯ ಇಲ್ಲಿದೆ..

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಹೊಸ ಅಧ್ಯಕ್ಷರನ್ನಾಗಿ ತಮಿಳುನಾಡು ಮೂಲದ ವಿಜ್ಞಾನಿ ಡಾ. ವಿ. ನಾರಾಯಣನ್ ಅವರನ್ನು ಕೇಂದ್ರ ಸರ್ಕಾರ ಮಂಗಳವಾರ ನೇಮಿಸಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜನವರಿ 2025, 3:10 IST
Last Updated 8 ಜನವರಿ 2025, 3:10 IST
<div class="paragraphs"><p>ವಿ. ನಾರಾಯಣನ್</p></div>

ವಿ. ನಾರಾಯಣನ್

   

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಹೊಸ ಅಧ್ಯಕ್ಷರನ್ನಾಗಿ ತಮಿಳುನಾಡು ಮೂಲದ ವಿಜ್ಞಾನಿ ಡಾ. ವಿ. ನಾರಾಯಣನ್ ಅವರನ್ನು ಕೇಂದ್ರ ಸರ್ಕಾರ ಮಂಗಳವಾರ ನೇಮಿಸಿದೆ.

ಇಸ್ರೊದ ಹಾಲಿ ಅಧ್ಯಕ್ಷ ವಿ. ಸೋಮನಾಥ್ ಅವರ ಅಧಿಕಾರಾವಧಿ ಇದೇ ಜನವರಿ 14ರಂದು ಅಂತ್ಯವಾಗಲಿದ್ದು ಅಂದೇ ವಿ. ನಾರಾಯಣನ್ ಅಧಿಕಾರ ಸ್ವೀಕರಿಸಲಿದ್ದಾರೆ.

ADVERTISEMENT

ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಗಳ ಸಂಚಾಲನೆಯ ವಿಷಯ ಪರಿಣಿತರಾಗಿರುವ ನಾರಾಯಣನ್ ಅವರು ಸದ್ಯ ಕೇರಳದ ತಿರುವನಂತಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೊದ ‘ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌’ನ  (LPSC) ನಿರ್ದೇಶಕರಾಗಿ 2018ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

ಐಐಟಿ ಖರಗ್‌ಪುರದಲ್ಲಿ ಎಂಜಿನಿಯರ್ ಪದವಿ ಮುಗಿಸಿ 1984 ರಲ್ಲಿ ಇಸ್ರೊ ಸೇರಿದ್ದ ನಾರಾಯಣನ್ ಅವರು ಆರಂಭದಲ್ಲಿ ವಿಕ್ರಮ್ ಸಾರಾಬಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಕೆಲಕಾಲ ಕೆಲಸ ಮಾಡಿದ್ದರು.

ನಂತರ 1989 ರಲ್ಲಿ ಕ್ರಯೋಜಿನಿಕ್ ಎಂಜಿನಿಯರಿಂಗ್ ವಿಷಯದಲ್ಲಿ ಐಐಟಿ ಖರಗ್‌ಪುರದಿಂದ ಎಂ.ಟೆಕ್ ಪದವಿಯನ್ನು ಮೊದಲ ಶ್ರೇಣಿಯೊಂದಿಗೆ ಪಾಸಾದರು. 2001 ರಲ್ಲಿ ಅದೇ ಸಂಸ್ಥೆಯಿಂದ ಏರೋಸ್ಪೇಸ್ ಎಂಜಿನಿಯರಿಂಗ್ ವಿಷಯದಲ್ಲಿ ಪಿ. ಎಚ್‌ಡಿ ಪಡೆದರು.

2001 ರಿಂದ ಇಸ್ರೊದ ರಾಕೆಟ್‌ಗಳಿಗೆ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬೇಕಾದ ಸಂಚಾಲನೆಯ ಸಾಧನ ಸಲಕರಣೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡ ಅವರು ಈ ವಿಷಯದಲ್ಲಿ ಹೊರದೇಶಗಳ ಅವಲಂಬನೆಯನ್ನು ತಗ್ಗಿಸಿದರು.

ಮಹತ್ವದ ಚಂದ್ರಯಾನದ ಪ್ರೊಪಲ್ಷನ್ ಸಿಸ್ಟಮ್‌ಗೆ ಕೆಲಸ ಮಾಡಿದ್ದ ನಾರಾಯಣನ್ ಅವರು ಸದ್ಯ ಇಸ್ರೊದ ಮಹತ್ವಾಕಾಂಕ್ಷೆಯ ಗಗನಯಾನ, ಚಂದ್ರಯಾನ–4 ಮತ್ತು ಸ್ಪೇಸ್ ಡಾಕಿಂಗ್ ಯೋಜನೆಯ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.

ಚೆನ್ನೈನ ಸತ್ಯಭಾಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅವರಿಗೆ ಸಂದಿದ್ದು, ಬಾಹ್ಯಾಕಾಶಕ್ಕೆ ಸಂಬಂಧಿಸಿದ ದೇಶ–ವಿದೇಶದ ಅನೇಕ ಪ್ರತಿಷ್ಠಿತ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಂತರರಾಷ್ಟ್ರೀಯ ಗಗನಯಾನಿಗಳ ಅಕಾಡೆಮಿಯ ಸದಸ್ಯರೂ ಹೌದು.

ಇಸ್ರೊದೊಂದಿಗೆ ನಾಲ್ಕು ದಶಕಕ್ಕೂ ಹೆಚ್ಚು ಕೆಲಸ ಮಾಡಿರುವ ನಾರಾಯಣನ್ ಜನವರಿ 14 ರಿಂದ ಎರಡು ವರ್ಷ ಇಸ್ರೊವನ್ನು ಮುನ್ನಡೆಸಲಿದ್ದಾರೆ.

–ಮಾಹಿತಿ ಆಧಾರ: LPSC

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.