ADVERTISEMENT

ಭಾರತದ ಕೋಲ್ಡ್‌ರಿಫ್, ರೆಸ್ಪಿಫ್ರೆಶ್, ರಿಲೈಫ್ ಕುರಿತು ಜಗತ್ತಿಗೆ WHO ಎಚ್ಚರಿಕೆ

ಪಿಟಿಐ
Published 14 ಅಕ್ಟೋಬರ್ 2025, 7:24 IST
Last Updated 14 ಅಕ್ಟೋಬರ್ 2025, 7:24 IST
<div class="paragraphs"><p>ಕೆಮ್ಮಿನ ಸಿರಪ್</p></div>

ಕೆಮ್ಮಿನ ಸಿರಪ್

   

(ಐಸ್ಟಾಕ್ ಚಿತ್ರ)

ನವದೆಹಲಿ:  ಮಕ್ಕಳ ಸರಣಿ ಸಾವಿಗೆ ಕಾರಣವಾಗಿರುವ ಭಾರತದಲ್ಲಿ ತಯಾರಾದ ಕೋಲ್ಡ್‌ರಿಫ್‌, ರೆಸ್ಪಿಫ್ರೆಶ್‌ ಟಿಆರ್ ಮತ್ತು ರಿಲೈಫ್‌ ಎಂಬ ಮೂರು ಕೆಮ್ಮಿನ ಸಿರಪ್‌ಗಳ ಗುಣಮಟ್ಟದ ಕುರಿತು ಜಗತ್ತಿನ ವಿವಿಧ ದೇಶಗಳ ರಾಷ್ಟ್ರೀಯ ನಿಯಂತ್ರಣ ಪ್ರಾಧಿಕಾರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. 

ADVERTISEMENT

ಭಾರತದ ಈ ಮೂರು ಸಿರಪ್‌ಗಳು ಎಲ್ಲಿಯೇ ಪತ್ತೆಯಾದರೂ ಕೂಡಲೇ ತಿಳಿಸುವಂತೆಯೂ ಸೂಚಿಸಿದೆ.

ಕಳಪೆ ಗುಣಮಟ್ಟದ ಉತ್ಪನ್ನಗಳ ಪತ್ತೆ ಮತ್ತು ಅವುಗಳ ಸೇವನೆಯಿಂದ ಎದುರಾಗುವ ಪ್ರತಿಕೂಲ ಪರಿಣಾಮಗಳ ಯಾವುದೇ ಘಟನೆ ಅಥವಾ ನಿರೀಕ್ಷಿತ ಪರಿಣಾಮಗಳ ಕುರಿತು ರಾಷ್ಟ್ರೀಯ ನಿಯಂತ್ರಕ ಪ್ರಾಧಿಕಾರ ಅಥವಾ ರಾಷ್ಟ್ರೀಯ ಔಷಧ ವಿಚಕ್ಷಣ ಕೇಂದ್ರಕ್ಕೆ ವರದಿ ಮಾಡುವಂತೆಯೂ ಸೂಚಿಸಿದೆ.

ಮಧ್ಯಪ್ರದೇಶದಲ್ಲಿ ಕೋಲ್ಡ್‌ರಿಫ್‌ ಸೇವಿಸಿದ 5 ವರ್ಷದೊಳಗಿನ ಕನಿಷ್ಠ 22 ಮಕ್ಕಳು ಶಂಕಿತ ಮೂತ್ರಪಿಂಡ ವೈಫಲ್ಯದಿಂದ ಮೃತಪಟ್ಟಿರುವುದಾಗಿ ವರದಿಯಾಗಿದೆ. ರಾಜಸ್ಥಾನದ ವಿವಿಧ ಜಿಲ್ಲೆಗಳಲ್ಲೂ ಕೆಮ್ಮಿನ ಸಿರಪ್‌ ಸೇವಿಸಿದ ನಂತರ ಕನಿಷ್ಠ ಮೂವರು ಮಕ್ಕಳು ಮೃತಪಟ್ಟಿವೆ ಎಂದು ಆರೋಪಿಸಲಾಗಿದೆ.

‘ಈ ಕಳಪೆ ಗುಣಮಟ್ಟದ ಉತ್ಪನ್ನಗಳು ಎಲ್ಲಿಯೂ ಬಳಕೆಯಾಗದಂತೆ ಪೂರೈಕೆ ಸರಪಳಿ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಅನಿಯಂತ್ರಿತ ಮಾರುಕಟ್ಟೆಯ ಮೇಲೂ ಕಣ್ಗಾವಲು ಇಡಬೇಕು’ ಎಂದು ಡಬ್ಲೂಎಚ್‌ಒ ಹೊರಡಿಸಿರುವ ಎಚ್ಚರಿಕೆಯಲ್ಲಿ ಹೇಳಲಾಗಿದೆ.

ಶೀತ, ಜ್ವರ ಅಥವಾ ಕೆಮ್ಮಿನ ಲಕ್ಷಣಗಳಿದ್ದಲ್ಲಿ ಅದನ್ನು ನಿವಾರಿಸಲು ಸಾಮಾನ್ಯವಾಗಿ ಬಳಸುವ ಸಕ್ರಿಯ ಪದಾರ್ಥಗಳನ್ನು ಒಳಗೊಂಡಿರುವ ದ್ರವ ರೂಪದ ಔಷಧ ಇವಾಗಿವೆ. ಈ ಸಿರಪ್‌ಗಳಲ್ಲಿ ಡೈಥಿಲೀನ್ ಗ್ಲೈಕಾಲ್ (DEG) ಎಂಬ ಹಾನಿಕಾರಕ ರಾಸಾಯನಿಕ ಇರುವುದನ್ನು ಭಾರತದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಅಕ್ಟೋಬರ್ 8ರಂದು ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿದ ವರದಿಯಲ್ಲಿ ಹೇಳಿತ್ತು. ಈ ಸಿರಪ್‌ಗಳ ತಯಾರಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸುವಂತೆಯೂ ಆದೇಶಿಸಿತ್ತು ಎಂದು ಮೂಲಗಳು ಹೇಳಿವೆ.

ಕೋಲ್ಡ್‌ರಿಫ್‌, ರೆಸ್ಪಿಫ್ರೆಶ್‌ ಟಿಆರ್‌ ಮತ್ತು ರಿಲೈಫ್‌ನ ನಿರ್ದಿಷ್ಟ ಬ್ಯಾಚ್‌ನ ಔಷಧಗಳು ಕಳಪೆ ಗುಣಮಟ್ಟ ಹೊಂದಿವೆ. ಇವುಗಳನ್ನು ಕ್ರಮವಾಗಿ ಸ್ರೆಸನ್‌ ಫಾರ್ಮಾ, ರೆಡ್ನೆಕ್ಸ್‌ ಫಾರ್ಮಾ ಮತ್ತು ಶೇಪ್‌ ಫಾರ್ಮಾ ಕಂಪನಿಗಳು ತಯಾರಿಸಿವೆ ಎಂದೂ ಎಚ್ಚರಿಸಲಾಗಿದೆ.

ಕಳಪೆ ಗುಣಮಟ್ಟದ ಯಾವುದೇ ಔಷಧ ಭಾರತದಿಂದ ರಫ್ತಾಗಿಲ್ಲ. ಅಕ್ರಮವಾಗಿ ರಫ್ತಾಗಿರುವ ಕುರಿತೂ ಯಾವುದೇ ಸಾಕ್ಷಿಗಳಿಲ್ಲ ಎಂದು ಸಿಡಿಎಸ್‌ಸಿಒ ವಿಶ್ವಸಂಸ್ಥೆಗೆ ತಿಳಿಸಿದೆ.

2024ರ ಡಿಸೆಂಬರ್‌ನಿಂದ ಈಚೆಗೆ ಕಳಂಕಿತ ಸಿರಪ್‌ಗಳ ತಯಾರಕ ಕಂಪನಿಗಳಿಂದ ಔಷಧಗಳ ಕುರಿತು ಎಚ್ಚರ ವಹಿಸುವಂತೆ ರಾಷ್ಟ್ರೀಯ ನಿಯಂತ್ರಕ ಪ್ರಾಧಿಕಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಗುರುತಿಸಲಾದ ಉತ್ಪನ್ನಗಳ ಗುಣಮಟ್ಟದ ಮಾನದಂಡಗಳು ಮತ್ತು ಅವುಗಳ ವಿಶೇಷಣಗಳನ್ನು ಪೂರೈಸಲು ವಿಫಲವಾದ ಕಾರಣ ಅವುಗಳನ್ನು ಕಳಪೆ ಗುಣಮಟ್ಟವೆಂದು ಪರಿಗಣಿಸಲಾಗಿದೆ. ಈ ಕಲುಷಿತ ಉತ್ಪನ್ನಗಳು ರೋಗಿಗಳಿಗೆ ಅಪಾಯವನ್ನುಂಟುಮಾಡುತ್ತವೆ ಎಂದೂ ಎಚ್ಚರಿಸಿದೆ.

'ದಾಸ್ತಾನಿನಲ್ಲಿ ಗುರುತಿಸಲಾದ ಈ ಉತ್ಪನ್ನಗಳು ಇದ್ದಲ್ಲಿ, ಅವುಗಳನ್ನು ಬಳಸಬೇಡಿ. ಈ ಉತ್ಪನ್ನಗಳನ್ನು ಯಾರಾದರೂ ಬಳಸಿದ್ದರೆ ಅಥವಾ ಬಳಕೆಯ ನಂತರ ಆರೋಗ್ಯದಲ್ಲಿ ವ್ಯತ್ಯಾಸಗಳು ಕಂಡುಬಂದರೆ ಅಥವಾ ಅನಿರೀಕ್ಷಿತ ಅಡ್ಡಪರಿಣಾಮಗಳು ಉಂಟಾದರೆ ತಕ್ಷಣ ವೈದ್ಯರ ಸಲಹೆ ಪಡೆಯಿರಿ’ ಎಂದೂ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.