ADVERTISEMENT

ಮೊದಲು ಯಾರಿಗೆಲ್ಲ ಸಿಗಲಿದೆ ಕೋವಿಡ್–19 ಲಸಿಕೆ? ಆರೋಗ್ಯ ಸಚಿವಾಲಯದ ಪ್ಲಾನ್ ರೆಡಿ

ಏಜೆನ್ಸೀಸ್
Published 14 ಅಕ್ಟೋಬರ್ 2020, 11:41 IST
Last Updated 14 ಅಕ್ಟೋಬರ್ 2020, 11:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೋವಿಡ್–19 ಲಸಿಕೆಯನ್ನು ಮೊದಲು ಯಾರಿಗೆಲ್ಲ ನೀಡಬೇಕು ಎಂಬುದನ್ನು ನಿರ್ಧರಿಸಲು ಸಮಿತಿ ರಚಿಸಲಾಗಿದೆ.

ಮುಂದಿನ ವರ್ಷದ ಮಧ್ಯಭಾಗದ ವೇಳೆಗೆ 40ರಿಂದ 50 ಕೋಟಿಯಷ್ಟು ಲಸಿಕೆ ವಿತರಣೆ ಮಾಡುವ ಬಗ್ಗೆ ಆರೋಗ್ಯ ಸಚಿವಾಲಯ ವಿಶ್ವಾಸ ಹೊಂದಿದೆ. ಯಾರಿಗೆ ಮೊದಲು ನೀಡಬೇಕು ಎಂಬುದನ್ನು ನಿರ್ಧರಿಸಲು ಸಮಿತಿ ರಚಿಸಲಾಗಿದೆ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಕೋವಿಡ್ ಲಸಿಕೆ ಲಭ್ಯವಾದ ಬಳಿಕ ಅದರ ವಿತರಣೆಗೆ ಏನೇನು ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಮಂಗಳವಾರ ಸಚಿವರ ತಂಡವನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದೂ ವರದಿ ಉಲ್ಲೇಖಿಸಿದೆ.

ADVERTISEMENT

ಸಮಿತಿಯಲ್ಲಿ ಲಸಿಕೆ ಆಡಳಿತದ ರಾಷ್ಟ್ರೀಯ ತಜ್ಞರ ತಂಡದ ಮುಖ್ಯಸ್ಥ ಡಾ. ವಿ.ಕೆ. ಪೌಲ್, ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೆರಿಯಾ, ವಿದೇಶಾಂಗ ವ್ಯವಹಾರ, ಜೈವಿಕತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರತಿನಿಧಿಗಳು, ಆರೋಗ್ಯ ಸೇವೆಗಳ ಪ್ರಧಾನ ನಿರ್ದೇಶಕ, ರಾಷ್ಟ್ರೀಯ ಏಡ್ಸ್ ಸಂಶೋಧನಾ ಸಂಸ್ಥೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹಾಗೂ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಇರಲಿದ್ದಾರೆ.

‘ಮುಂಚೂಣಿ ಕಾರ್ಮಿಕರನ್ನು ಗುರುತಿಸುವುದು, ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿರುವ ದತ್ತಾಂಶಗಳ ಮರುಸಂಗ್ರಹಣೆ, ಲಸಿಕೆಯೇತರ ಪೂರೈಕೆ, ಈ ವಿಚಾರಗಳ ಬಗ್ಗೆ ವಿಸ್ತೃತ ಯೋಜನಾ ಅನುಷ್ಠಾನದ ವೇಳೆ ಗಮನಹರಿಸಲಾಗುತ್ತದೆ’ ಎಂದು ಡಾ. ವಿ.ಕೆ. ಪೌಲ್ ಹೇಳಿದ್ದಾರೆ.

‘ಮೊದಲು ಯಾವ ವಿಭಾಗದ ಜನರಿಗೆ ಲಸಿಕೆ ನೀಡಬೇಕು ಎಂಬುದರ ಕುರಿತು ಸಮಗ್ರ ಅಧ್ಯಯನ ನಡೆಸಿದ್ದೇವೆ. ಈ ಸಮಿತಿಯು ಅಮೆರಿಕದ ಕಾಯಿಲೆ ನಿಯಂತ್ರಣ ಕೇಂದ್ರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್‌ಒ) ಸ್ಪೂರ್ತಿ ಪಡೆದಿದೆ’ ಎಂದೂ ಪೌಲ್ ಹೇಳಿದ್ದಾರೆ.

ಸದ್ಯ ದೇಶದಲ್ಲಿ ಮೂರು ಲಸಿಕೆಗಳ ಪ್ರಯೋಗ ನಡೆಯುತ್ತಿದೆ. ಭಾರತ್ ಬಯೋಟೆಕ್‌ ಹಾಗೂ ಐಸಿಎಂಆರ್ ಸಹಯೋಗದ ‘ಕೊವಾಕ್ಸಿನ್’ ಪ್ರಯೋಗ ಎರಡನೇ ಹಂತದಲ್ಲಿದೆ. ಜೈಡಸ್‌ ಕ್ಯಾಡಿಲಾ ಮತ್ತು ಆಸ್ಟ್ರಾಜೆನೆಕಾ ಲಸಿಕೆಗಳ ಪ್ರಯೋಗವೂ ಪ್ರಗತಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.