ADVERTISEMENT

IT Raid: ಧೀರಜ್‌ ಸಾಹು ಬಗ್ಗೆ ರಾಹುಲ್ ಗಾಂಧಿ ಮೌನವೇಕೆ: ಕಿಶನ್‌ ರೆಡ್ಡಿ ಪ್ರಶ್ನೆ

ಪಿಟಿಐ
Published 10 ಡಿಸೆಂಬರ್ 2023, 11:04 IST
Last Updated 10 ಡಿಸೆಂಬರ್ 2023, 11:04 IST
<div class="paragraphs"><p>ಜಿ. ಕಿಶನ್‌ ರೆಡ್ಡಿ</p></div>

ಜಿ. ಕಿಶನ್‌ ರೆಡ್ಡಿ

   

ಹೈದರಾಬಾದ್‌: ಜಾರ್ಖಂಡ್‌ನ ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಧೀರಜ್‌ ಪ್ರಸಾದ್‌ ಸಾಹು ಅವರಿಗೆ ಸೇರಿದ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಕುರಿತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಏಕೆ ಮೌನವಾಗಿದ್ದಾರೆ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಅಧಿಕಾರಿಗಳ ಕಾರ್ಯಾಚರಣೆ ವೇಳೆ ಪತ್ತೆಯಾಗಿರುವ ದಾಖಲೆಯಿಲ್ಲದ ನಗದನ್ನು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಳಸಿಕೊಳ್ಳಲು ಉದ್ದೇಶಿಸಿರಬಹುದು ಎಂದು ಆರೋಪಿಸಿದ್ದಾರೆ.

ADVERTISEMENT

ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭುವನೇಶ್ವರದ ಬೌದ್ಧ್ ಡಿಸ್ಟಿಲರಿ ಪ್ರೈವೇಟ್‌ ಲಿಮಿಟೆಡ್‌ನ ವಿವಿಧ ಕಚೇರಿ ಮೇಲೆ ದಾಳಿ ನಡೆಸಿದ್ದು, ಜಪ್ತಿ ಮಾಡಿರುವ ಹಣ ₹ 290 ಕೋಟಿಗೆ ಏರುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಸಾಹು ಅವರಿಗೆ ಸೇರಿದ ಅನೇಕ ಸ್ಥಳಗಳ ಮೇಲೂ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಾಹು ಅವರನ್ನು ಕಪ್ಪುಹಣದ ನಾಯಕ ಎಂದು ಕಿಶನ್‌ ರೆಡ್ಡಿ ಟೀಕಿಸಿದ್ದು, ಸಾಹು ಅವರು ರಾಹುಲ್‌ ಗಾಂಧಿಯ ಆಪ್ತರಾಗಿದ್ದಾರೆ. ಕಳೆದ ವರ್ಷ ನಡೆದ ಭಾರತ್ ಜೋಡೊ ಯಾತ್ರೆಯ ಎಲ್ಲಾ ಸಿದ್ಧತೆಗಳನ್ನು ಸಾಹು ನೋಡಿಕೊಂಡಿದ್ದರು ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ನಾಯಕರು ದೇಶವನ್ನು ಹೇಗೆ ಲೂಟಿ ಮಾಡಿದ್ದಾರೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಪಕ್ಷವು ಸಾಹು ಅವರನ್ನು ಮೂರು ಬಾರಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದು ಏಕೆ ಎಂಬುದಕ್ಕೆ ಕಾಂಗ್ರೆಸ್‌ ಪಕ್ಷ ಮತ್ತು ರಾಹುಲ್‌ ಗಾಂಧಿ ಅವರು ಜನರಿಗೆ ವಿವರಣೆ ನೀಡಬೇಕು ಎಂದು ಕಿಶನ್‌ ರೆಡ್ಡಿ ಆಗ್ರಹಿಸಿದ್ದಾರೆ.

2018ರ ರಾಜ್ಯಸಭಾ ಚುನಾವಣೆಯ ಅಫಿಡವಿಟ್‌ನಲ್ಲಿ ಸಾಹು ಅವರು ತಮ್ಮ ಬಳಿ ₹34 ಕೋಟಿ ಮೌಲ್ಯದ ಆಸ್ತಿ ಇದೆ ಎಂದು ತೋರಿಸಿದ್ದಾರೆ. ಆದರೆ, ಇಷ್ಟೊಂದು ‘ಕಪ್ಪು ಹಣವನ್ನು’ ಸಂಗ್ರಹಿಸಲು ಹೇಗೆ ಸಾಧ್ಯವಾಯಿತು ಎಂದು ಆಶ್ಚರ್ಯವಾಗುತ್ತದೆ ಎಂದು ರೆಡ್ಡಿ ಹೇಳಿದ್ದಾರೆ.

ದೇಶದಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗಲೆಲ್ಲಾ ರಾಹುಲ್‌ ಗಾಂಧಿ ಅವರು ಅಬ್ಬರ ಮಾಡುತ್ತಾರೆ. ನಿಮ್ಮ ಪಕ್ಷದ ಸಂಸದರ ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ನಿಮ್ಮಿಂದ ಏಕೆ ಪ್ರತಿಕ್ರಿಯೆ ಬರಲಿಲ್ಲ, ನೀವು ಸಾಮಾಜಿಕ ಮಾಧ್ಯಮದಲ್ಲಿ ಏಕೆ ಪೋಸ್ಟ್‌ ಮಾಡಿಲ್ಲ ಎಂದು ರೆಡ್ಡಿ ಪ್ರಶ್ನಿಸಿದ್ದಾರೆ.

ಈ ದೇಶದ ಜನತೆಗೆ ರಾಹುಲ್‌ ಗಾಂಧಿ ಅವರು ಉತ್ತರ ನೀಡಬೇಕು ಎಂದು ಆಗ್ರಹಿಸಿದ ರೆಡ್ಡಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.