ADVERTISEMENT

ಲಾಲು ನೆಲದಲ್ಲಿ ಆರ್‌ಜೆಡಿ ನುಚ್ಚುನೂರಾಗಿದ್ದೇಕೆ?

ಬಿಹಾರದಲ್ಲಿ ಮಹಾಮೈತ್ರಿಯ ಸೋಲಿಗೆ ಕಾರಣಗಳು ಹಲವು

ಅಭಯ್ ಕುಮಾರ್
Published 29 ಮೇ 2019, 19:30 IST
Last Updated 29 ಮೇ 2019, 19:30 IST
   

ಪಟ್ನಾ: ಬಿಹಾರದಲ್ಲಿ ಈ ಬಾರಿ ನಡೆದ ಲೋಕಸಭಾ ಚುನಾವಣೆಯು ಮೂರು ಮುಖ್ಯ ಕಾರಣಗಳಿಗಾಗಿ ಇತಿಹಾಸದಲ್ಲಿ ದಾಖಲಾಗಲಿದೆ.

ಮೊದಲನೆಯದಾಗಿ, ರಾಜ್ಯದ 40 ಲೋಕಸಭಾ ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಲ್ಲಿ ಎನ್‌ಡಿಎ ಈ ಹಿಂದೆ ಎಂದೂ ಗೆದ್ದಿರಲಿಲ್ಲ. ಈಗ ಅಲ್ಲಿ ಎನ್‌ಡಿಎ ಯಶಸ್ಸಿನ ಪ್ರಮಾಣ ಶೇ 97.5ರಷ್ಟು. ಎರಡನೆಯದಾಗಿ, 1997ರ ಜುಲೈ 5ರಂದು ಆರ್‌ಜೆಡಿ ಪಕ್ಷ ಸ್ಥಾಪನೆಯಾಯಿತು. ಆಗಿನಿಂದ ಈವರೆಗೆ ಲೋಕಸಭೆಯಲ್ಲಿ ಬಿಹಾರದಲ್ಲಿ ಒಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗದ್ದು ಈ ಬಾರಿ ಮಾತ್ರ. ವಿಧಾನಸಭೆಯಲ್ಲಿ ಈಗಲೂ ಆರ್‌ಜೆಡಿ ಅತ್ಯಂತ ದೊಡ್ಡ ಪಕ್ಷ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರು ಲೋಕಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಇಲ್ಲದ್ದು ಕೂಡ ಇದೇ ಮೊದಲು. ಮೇವು ಹಗರಣದಲ್ಲಿ ತಪ್ಪಿತಸ್ಥರಾಗಿರುವ ಅವರು ಈಗ ರಾಂಚಿಯ ಜೈಲಿನಲ್ಲಿದ್ದಾರೆ.

ಆದರೆ, ಸುಮಾರು ಎರಡು ದಶಕ ರಾಜ್ಯವನ್ನು ಆಳಿದ್ದ ಮತ್ತು ಈಗಲೂ ಮುಖ್ಯ ವಿರೋಧ ಪಕ್ಷವಾಗಿರುವ ಆರ್‌ಜೆಡಿ ಒಂದು ಕ್ಷೇತ್ರವನ್ನೂ ಗೆಲ್ಲಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು ಹೇಗೆ?

ADVERTISEMENT

ಲೋಕಸಭೆ ಚುನಾವಣೆಯಲ್ಲಿ ಪಕ್ಷವು ನುಚ್ಚುನೂರಾಗಲು ಹಲವು ಕಾರಣಗಳಿವೆ. ಮೊದಲನೆಯದಾಗಿ, ಅಜೇಯ ಎಂದು ಕಾಣಿಸುವಂತಹ ಮೈತ್ರಿಕೂಟವನ್ನು ಎನ್‌ಡಿಎ ಕಟ್ಟಿಕೊಂಡಿತ್ತು. ಘಟಕ ಪಕ್ಷಗಳ ನಡುವೆ ಪರಸ್ಪರ ಗೌರವ ಇತ್ತು. ಆದರೆ, ಆರ್‌ಜೆಡಿ ನೇತೃತ್ವದಲ್ಲಿ ರೂಪುಗೊಂಡ ಮಹಾಮೈತ್ರಿಯು ಅತ್ಯಂತ ಜಾಳುಜಾಳಾದ ವ್ಯವಸ್ಥೆಯಾಗಿತ್ತು. ಕಾಂಗ್ರೆಸ್‌, ಎಚ್‌ಎಎಂ, ಆರ್‌ಎಲ್‌ಎಸ್‌ಪಿ ಮುಂತಾದ ಪಕ್ಷಗಳು ಮೈತ್ರಿಕೂಟದಲ್ಲಿ ಇದ್ದವು. ಆದರೆ, ಒಂದು ಪಕ್ಷದ ಮುಖಂಡರನ್ನು ಕಂಡರೆ ಇನ್ನೊಂದು ಪಕ್ಷದವರಿಗೆ ಆಗುತ್ತಿರಲಿಲ್ಲ. ಎಲ್ಲ ನಾಯಕರೂ ಸ್ವಾರ್ಥಿಗಳು ಮತ್ತು ಮಹತ್ವಾಕಾಂಕ್ಷಿಗಳಾಗಿದ್ದರು. ಕಾಂಗ್ರೆಸ್‌ ಮತ್ತು ಆರ್‌ಜೆಡಿಯನ್ನು ಬಿಟ್ಟರೆ ಉಳಿದ ಪಕ್ಷಗಳು ಸಣ್ಣ ಸಣ್ಣ ಜಾತಿ ಕೇಂದ್ರಿತ ಪಕ್ಷಗಳಾಗಿದ್ದವು. ಈ ಎಲ್ಲ ಪಕ್ಷಗಳು ತಮ್ಮ ಸಾಮರ್ಥ್ಯ ಎಷ್ಟೋ ಅದರ ಎಷ್ಟೋ ಪಟ್ಟು ಹೆಚ್ಚು ಕ್ಷೇತ್ರಗಳನ್ನು ಪಡೆದುಕೊಂಡವು.

ಎರಡನೆಯದಾಗಿ, ತೇಜಸ್ವಿ ಯಾದವ್‌ ಅವರು ಆರ್‌ಜೆಡಿಯ ಮುಖ್ಯ ಪ್ರಚಾರಕರಾಗಿದ್ದರು. ಆದರೆ, ಜನರನ್ನು ಆಕರ್ಷಿಸುವಂತಹ ಚುನಾವಣಾ ವಿಷಯ ಅವರಲ್ಲಿ ಇರಲಿಲ್ಲ. ನಿತೀಶ್‌ ಅವರು ಬೆನ್ನಿಗೆ ಇರಿದರು ಎಂಬುದನ್ನೇ ಅವರು ನಿರಂತರವಾಗಿ ಹೇಳುತ್ತಾ ಹೋದರು. ಉತ್ತಮ ಆಡಳಿತ ಮತ್ತು ಭ್ರಷ್ಟಾಚಾರರಹಿತ ವರ್ಚಸ್ಸು ನಿತೀಶ್‌ ಅವರ ಸುತ್ತ ಪ್ರಭಾವಳಿ ಸೃಷ್ಟಿಸಿತ್ತು. ಹಾಗಾಗಿ ತೇಜಸ್ವಿ ಅವರ ಆರೋಪಗಳು ಜನರನ್ನು ಸೆಳೆಯಲಿಲ್ಲ.

ಮೂರನೆಯದಾಗಿ, ನಿತೀಶ್‌ ಅವರು ಪ್ರಚಾರದ ಸಂದರ್ಭದಲ್ಲಿ ಎಲ್ಲಿಯೂ ಕೆಟ್ಟ ಭಾಷೆ ಬಳಸಲಿಲ್ಲ. ತಮ್ಮ ಸರ್ಕಾರದ ಸಾಧನೆಯನ್ನು ಬಣ್ಣಿಸುವ ಕೆಲಸವನ್ನಷ್ಟೇ ಅವರು ಮಾಡಿದರು. ಗ್ರಾಮೀಣ ವಿದ್ಯುದೀಕರಣ, ಕುಡಿಯುವ ನೀರಿನ ಯೋಜನೆಗಳು, ರಸ್ತೆ ಮತ್ತು ಪಾನನಿಷೇಧ ಅವರ ಪ್ರಚಾರ ಭಾಷಣಗಳ ಮುಖ್ಯ ಅಂಶಗಳಾಗಿದ್ದವು. ಅಭಿವೃದ್ಧಿಯ ಶ್ರೇಯವನ್ನು ನಿತೀಶ್‌ ಅವರು ನರೇಂದ್ರ ಮೋದಿ ಅವರ ಜತೆಗೂ ಹಂಚಿಕೊಂಡರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿದ್ದರೆ ಪ್ರಗತಿಗೆ ಎರಡು ಎಂಜಿನ್‌ಗಳ ಬಲ ದೊರೆಯುತ್ತದೆ ಎಂದು ಪ್ರತಿಪಾದಿಸಿದರು.

ನಾಲ್ಕನೆಯದಾಗಿ, ಲಾಲು ಮತ್ತು ಕುಟುಂಬವನ್ನು ಕೆಟ್ಟದಾಗಿ ಬಿಂಬಿಸುವಲ್ಲಿ ಬಿಜೆಪಿ ಮುಖಂಡರು ಯಶಸ್ವಿಯಾದರು. ರಾಬ್ಡಿ ದೇವಿ ನಿವಾಸದಲ್ಲಿ ಸಿಬಿಐ ಮತ್ತು ಇ.ಡಿ. ಶೋಧಗಳು, ಲಾಲು ಕುಟುಂಬದೊಳಗಿನ ಒಳಜಗಳಗಳೆಲ್ಲವೂ (ಲಾಲು ಮಕ್ಕಳಾದ ತೇಜಸ್ವಿ ಯಾದವ್‌ ಮತ್ತು ತೇಜ್ ಪ್ರತಾಪ್‌ ನಡುವಣ ಸಂಘರ್ಷ) ಇದಕ್ಕೆ ಪುಷ್ಟಿ ನೀಡಿದವು.

‘ಈಗ, ಲಾಲು ಅವರು ವಿರೋಧಪಕ್ಷಗಳ ಒಗ್ಗಟ್ಟಿನ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಸಿಪಿಐ ಮುಖಂಡರು ವಿನಂತಿಸಿಕೊಂಡರೂ ಕನ್ಹಯ್ಯಾ ಕುಮಾರ್‌ ವಿರುದ್ಧ ಅವರು ಆರ್‌ಜೆಡಿಯ ಅಭ್ಯರ್ಥಿ ಹಾಕಿದ್ದರು. ವಿರೋಧ ಪಕ್ಷಗಳ ನಡುವಣ ಈ ಭಿನ್ನಮತವು ಎನ್‌ಡಿಎಗೆ ಭಾರಿ ಫಸಲನ್ನೇ ಕೊಟ್ಟಿತು’ ಎಂದು ರಾಜಕೀಯ ವಿಶ್ಲೇಷಕ ಅಜಯ್‌ ಕುಮಾರ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.