ಪವನ್ ಖೇರಾ
ನವದೆಹಲಿ: ಭಾರತದಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲು ನನ್ನ ಸ್ನೇಹಿತ ಮೋದಿಗೆ ಸುಮಾರು ₹180 ಕೋಟಿ (21 ದಶಲಕ್ಷ ಅಮೆರಿಕನ್ ಡಾಲರ್) ನೀಡಿರುವುದಾಗಿ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನ್ನೇ ಉಲ್ಲೇಖಿಸಿರುವ ಕಾಂಗ್ರೆಸ್, ‘ಈ ಆರೋಪ ವಿರೋಧಿಸದೇ ಕೇಸರಿ ಪಕ್ಷ ಮೌನ ವಹಿಸಿರುವುದು ಏಕೆ’ ಎಂದು ಪ್ರಶ್ನಿಸಿದೆ.
ಬಿಜೆಪಿ ಮಾತ್ರವಲ್ಲದೇ, ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷವಾಗಿರುವ ಎಎಪಿ ವಿರುದ್ಧವೂ ತನ್ನ ವಾಗ್ದಾಳಿ ಮುಂದುವರಿಸಿದೆ. 2012ರಲ್ಲಿ 3.65 ಲಕ್ಷ ಅಮೆರಿಕನ್ ಡಾಲರ್ ದೇಣಿಗೆ ಬಂದಿರುವುದು ಎಎಪಿ ಪಕ್ಷ ಸ್ಥಾಪನೆಗೆ ದಕ್ಕಿದ ನೆರವೇ? ಎಂದೂ ಕೇಳಿದೆ.
ಈ ಕುರಿತು ಮಾತನಾಡಿರುವ ಕಾಂಗ್ರೆಸ್‌ನ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ, ‘ಯುಎಸ್‌ಎಐಡಿಯ ಭಾಗವಾಗಿ ‘ಪ್ರಜಾಸತ್ತಾತ್ಮಕ ಪಾಲುದಾರಿಕೆ ಹಾಗೂ ನಾಗರಿಕ ಸಮಾಜ‘ ಕಾರ್ಯಕ್ರಮಕ್ಕೆ ಸಂದಿರುವ 3.65 ಲಕ್ಷ ಅಮೆರಿಕನ್ ಡಾಲರ್ ದೇಣಿಗೆಯು ತಾನು ಪ್ರಧಾನಿಯಾಗಲು ಹಿರಿಯ ಎಲ್.ಕೆ. ಅಡ್ವಾನಿ ವಿರುದ್ಧ ನರೇಂದ್ರ ಮೋದಿ ಹೆಣೆದ ಸಂಚಿನ ಭಾಗವೇ?’ ಎಂದಿದ್ದಾರೆ.
ಟ್ರಂಪ್ ಹೇಳಿಕೆ ಕುರಿತು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ್ದು, ಭಾರತಕ್ಕೆ 21 ದಶಲಕ್ಷ ಅಮೆರಿಕನ್ ಡಾಲರ್ ನೀಡುವ ಯಾವುದೇ ಉದ್ದೇಶವಿಲ್ಲ ಎಂಬ ಟ್ರಂಪ್ ಹೇಳಿಕೆಯನ್ನೇ ಖೇರಾ ಉಲ್ಲೇಖಿಸಿದ್ದಾರೆ. ‘ದೇಶದ ಚುನಾವಣಾ ವ್ಯವಸ್ಥೆಯಲ್ಲಿ ವಿದೇಶಗಳ ಹಸ್ತಕ್ಷೇಪದ ಆರೋಪವನ್ನು ಅಲ್ಲಗಳೆಯಲು ಮೋದಿ ಸರ್ಕಾರ, ಆರ್ಥಿಕ ಸಲಹೆಗಾರ, ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಹಾಗೂ ಚೀಯರ್ ಲೀಡರ್‌ಗಳಂತೆ ಕೆಲಸ ಮಾಡುವ ಬಿಜೆಪಿ ಮಾಧ್ಯಮ ಸಮೂಹವು ಪ್ರಯಾಸಪಡುತ್ತಿದೆ’ ಎಂದಿದ್ದಾರೆ.
‘ಪ್ರಧಾನಿ ಮೋದಿ ಅವರು ತಕ್ಷಣ ತಮ್ಮ ಸ್ನೇಹಿತನಿಗೆ ಕರೆ ಮಾಡಿ, ಇಂಥ ಹೇಳಿಕೆ ನೀಡಿದ್ದೇಕೆ ಎಂದು ಕೇಳಲಿ. ಒಂದೊಮ್ಮೆ ಈ ಆರೋಪ ಎದುರಿಸದಿದ್ದಲ್ಲಿ, ಟ್ರಂಪ್ ಹೇಳಿದ್ದೇ ಸರಿ ಎಂದಾಗಲಿದೆ. ಆದರೂ ಇಷ್ಟೊಂದು ಮೌನವೇಕೆ? ಇಲ್ಲಿ ಯಾರು ಸುಳ್ಳು ಹೇಳುತ್ತಿದ್ದಾರೆ? ಪಕ್ಷ, ವ್ಯಕ್ತಿ, ಹಾಗೂ ರಾಜಕೀಯ ಸಂಸ್ಥೆಗಳ ಸೋಗಿನಲ್ಲಿ ಇಷ್ಟೊಂದು ಹಣ ಪಡೆದವರ ಕುರಿತು ಸರ್ಕಾರ ಶ್ವೇತಪತ್ರ ಹೊರಡಿಸಬೇಕು’ ಎಂದು ಖೇರಾ ಆಗ್ರಹಿಸಿದ್ದಾರೆ.
‘ಸರ್ಕಾರ ಬಿಡುಗಡೆ ಮಾಡುವುದೇ ಆದರೆ, ಆ ಶ್ವೇತಪತ್ರವು ಕೇವಲ ಯುಎಸ್‌ಏಡ್ ಬಗ್ಗೆ ಮಾತ್ರ ಮಾಹಿತಿ ನೀಡದೇ, ಭಾರತೀಯ ಕಾನೂನಿನನ್ವಯ ಯಾವೆಲ್ಲಾ ಸಂಸ್ಥೆಗಳು ಈ ದೇಣಿಗೆ ಪಡೆದು ಸರ್ಕಾರಕ್ಕೆ ಮತ್ತು ವ್ಯಕ್ತಿಗಳಿಗೆ ನೆರವಾಗಿವೆ ಎಂಬುದನ್ನು ವಿವರಿಸಬೇಕು’ ಎಂದಿವೆ.
‘ಯುಎಸ್‌ಏಡ್‌ನ ಭಾಗವಾಗಿ 2021 ಹಾಗೂ 2024ರಲ್ಲಿ 650 ದಶಲಕ್ಷ ಅಮೆರಿಕನ್ ಡಾಲರ್ ಭಾರತ ಪಡೆದಿದೆ. ಮೋದಿ ಸರ್ಕಾರವು ಈ ಹಣವನ್ನು ಏಕೆ ಮತ್ತು ಯಾವ ಉದ್ದೇಶಕ್ಕಾಗಿ ಪಡೆದಿದೆ ಎಂಬುದನ್ನು ತಿಳಿಸಬೇಕು. ಮೊದಲ ಹಂತದಲ್ಲಿ 2021ರ ಅ. 1ರಂದು ಅಮೆರಿಕ ನೀಡಿದ 3.65 ಲಕ್ಷ ಅಮೆರಿಕನ್ ಡಾಲರ್ ವಿನಿಯೋಗವಾಗಿದ್ದರ ಮಾಹಿತಿಯನ್ನು ಜನರ ಮುಂದಿಡುವುದು ಅಗತ್ಯ’ ಎಂದಿದ್ದಾರೆ.
‘2012ರಲ್ಲಿ ಅಣ್ಣಾ ಹಜಾರೆ ಚಳವಳಿ ಪ್ರಚಲಿತದಲ್ಲಿತ್ತು. ಅದೇ ಸಂದರ್ಭದಲ್ಲಿ ಅರವಿಂದ ಕೇಜ್ರಿವಾಲ್ ಅವರು ಹೊಸ ಪಕ್ಷ ಸ್ಥಾಪನೆಯ ಸಿದ್ಧತೆಯಲ್ಲಿದ್ದರು. ದೇಶದ ಪ್ರಧಾನಿಯಾಗುವ ಯತ್ನದಲ್ಲಿ ನರೇಂದ್ರ ಮೋದಿ ಇದ್ದರು. ಅಮೆರಿಕದಿಂದ ಬಂದ ಈ ದೇಣಿಗೆಯು ಯಾರಿಗೆ ನೆರವಾಯಿತು? ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಸೀಟುಗಳನ್ನು ಹೇಗೆ ಪಡೆಯಿತು? ನಂತರ ದೇಣಿಗೆಯು 2020 ಹಾಗೂ 2024ರಲ್ಲಿ ಅಮೆರಿಕದಿಂದ ಭಾರತಕ್ಕೆ ಬಂದಿದೆ’ ಎಂದು ಆರೋಪಿಸಿದ್ದಾರೆ.
‘ದೇಶದಲ್ಲಿರುವ ವಿಶ್ವಾಸಾರ್ಹ ವ್ಯಕ್ತಿಗಳು ಹಾಗೂ ನಾಗರಿಕ ಸಮಿತಿಗಳ ಸದಸ್ಯರು, ಎನ್‌ಜಿಒಗಳು ಮತ್ತು ಪಕ್ಷಗಳ ವಿರುದ್ಧ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಪ್ರಾಯೋಜಕತ್ವ ಪಡೆದ ನಟರು ಸುಳ್ಳು ಆರೋಪಗಳ ಮೂಲಕ ತೇಜೋವಧೆ ಮಾಡುವವರು ಸಾರ್ವಜನಿಕ ವಲಯದಲ್ಲಿ ಅವಮಾನಿತರಾಗುವುದಷ್ಟೇ ಅಲ್ಲ, ದೇಶಕ್ಕೆ ಸುಳ್ಳು ಮಾಹಿತಿ ನೀಡಿದ ಇಂಥವರ ವಿರುದ್ಧ ಕಾನೂನು ಕ್ರಮವನ್ನೂ ಜರುಗಿಸಬೇಕು ಎಂದು ಖೇರಾ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.