ನವದೆಹಲಿ: ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕದಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆಗಳು ಮೇ 7ರಿಂದ ಆರಂಭವಾಗಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಹೇಳಿದೆ.
ಹಂತ ಹಂತವಾಗಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಕೋವಿಡ್–19 ಲಾಕ್‌ಡೌನ್‌ನಿಂದ ಸಿಲುಕಿರುವವರನ್ನು ಕರೆತರುವ ವ್ಯವಸ್ಥೆ ಮಾಡಲಾಗುತ್ತದೆ ಎಂದಿದೆ.
ಭಾರತದಲ್ಲಿ ಮೂರನೇ ಹಂತದ ಲಾಕ್‌ಡೌನ್ ಜಾರಿಯಾಗಿರುವ ದಿನದಂದೇ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳು 42,000 ದಾಟಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಭಾರತೀಯರು ಕಾರ್ಯನಿರ್ವಹಿಸುತ್ತಿದ್ದು, ಮೊದಲ ಹಂತದಲ್ಲಿ ಯುಎಇಯಿಂದ ಭಾರತೀಯರನ್ನು ಕರೆತರುವ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ಯುಎಇಯಲ್ಲಿ ಸುಮಾರು 34 ಲಕ್ಷ ಭಾರತೀಯರು ನೆಲೆಸಿದ್ದಾರೆ. ಅನಂತರ ಸೌದಿ ಅರೇಬಿಯಾ ಹಾಗೂ ಕುವೈತ್‌ನಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗುತ್ತದೆ. 1990ರ ಗಲ್ಫ್ ಯುದ್ಧ ಸಂದರ್ಭದಲ್ಲಿ ಕುವೈತ್‌ನಿಂದ 1,70,000 ಭಾರತೀಯ ನಾಗರಿಕರನ್ನು ಕರೆತರಲಾಗಿತ್ತು. ವಾಯು ಮಾರ್ಗದಲ್ಲಿ ಈವರೆಗಿನ ಜಗತ್ತಿನ ಅತಿ ದೊಡ್ಡ ಸ್ಥಳಾಂತರಿಸುವಿಕೆಯಾಗಿ ಅದು ದಾಖಲಾಗಿದೆ.
ಕೋವಿಡ್–19 ಲಕ್ಷಣಗಳನ್ನು ಹೊಂದಿರದವರು ಹಾಗೂ ಪಾವತಿ ಆಧಾರದ ಮೇಲೆ ವಿಮಾನ ಸೇವೆ ನೀಡಲಾಗುತ್ತದೆ ಎಂದು ಗೃಹ ಸಚಿವಾಲಯ ಹೇಳಿದೆ.
ಗಲ್ಫ್ ರಾಷ್ಟ್ರಗಳನ್ನು ಹೊರತು ಪಡಿಸಿ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಸೇರಿದಂತೆ ಹಲವರಿಂದ ವಾಪಸ್ ಕರೆಸಿಕೊಳ್ಳಲು ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿವೆ. ಬ್ರಿಟನ್, ಕೆನಡಾ, ಅಮೆರಿಕ, ರಷ್ಯಾ, ಸಿಂಗಾಪುರ್, ಫಿಲಿಪ್ಪೀನ್ಸ್‌ನಲ್ಲಿ ಸಾವಿರಾರು ಜನ ಕಾದಿದ್ದಾರೆ. ರಷ್ಯಾದಲ್ಲಿ 15,000 ಭಾರತೀಯ ವಿದ್ಯಾರ್ಥಿಗಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.