ADVERTISEMENT

ಅ.10ರೊಳಗೆ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ: ಸುಪ್ರೀಂಕೋರ್ಟ್‌ಗೆ ಸಿಬಿಎಸ್‌ಇ

ಪಿಟಿಐ
Published 24 ಸೆಪ್ಟೆಂಬರ್ 2020, 9:57 IST
Last Updated 24 ಸೆಪ್ಟೆಂಬರ್ 2020, 9:57 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ದೇಶದಾದ್ಯಂತ 12ನೇ ತರಗತಿ ಪೂರಕ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳ ಫಲಿತಾಂಶವನ್ನು ಅಕ್ಟೋಬರ್‌ 10 ಅಥವಾ ಅದಕ್ಕೂ ಮುನ್ನವೇ ಪ್ರಕಟಿಸುವುದಾಗಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್‌ಇ) ಸುಪ್ರೀಂಕೋರ್ಟ್‌ಗೆ ಗುರುವಾರ ತಿಳಿಸಿದೆ.

ಪರೀಕ್ಷೆ ಬರೆಯುವ ಎರಡು ಲಕ್ಷ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆ ಆಗದಂತೆ ಕ್ರಮ ತೆಗೆದುಕೊಳ್ಳುವುದಾಗಿ ಮಂಡಳಿಯು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ಪೀಠಕ್ಕೆ ತಿಳಿಸಿತು.

ಈಗಾಗಲೇ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಪ್ರಥಮ ಪದವಿ ಕೋರ್ಸ್‌ಗಳಿಗೆ ಸಂಬಂಧಿಸಿದಂತೆ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ ವಿದ್ಯಾರ್ಥಿಗಳು ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಕ್ಟೋಬರ್‌ 31ರವರೆಗೂ ಕಾಲಾವಕಾಶ ಇದೆ. ಅಷ್ಟೊರಳಗೆ ಮಂಡಳಿಯು 12ನೇ ತರಗತಿಯ ಪೂರಕ ಪರೀಕ್ಷೆಗಳ ಫಲಿತಾಂಶ ಪ್ರಕಟಿಸುತ್ತದೆ ಎಂದು ಸಿಬಿಎಸ್‌ಇ ನ್ಯಾಯಪೀಠಕ್ಕೆ ಮನದಟ್ಟು ಮಾಡಿತು.

ADVERTISEMENT

ಈ ವೇಳೆ, ಕೋವಿಡ್‌–19 ಸಾಂಕ್ರಾಮಿಕ ರೋಗವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್‌, ಈ ಕ್ಲಿಷ್ಟ ಸಮಯದಲ್ಲಿ ಸಿಬಿಎಸ್‌ಇ ಮತ್ತು ಯುಜಿಸಿ ವಿದ್ಯಾರ್ಥಿಗಳಿಗೆ ನೆರವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಮಂಡಳಿಯು ತಡಮಾಡದೇ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಿಸಬೇಕು ಮತ್ತು ಯುಜಿಸಿಯು ಈ ವಿದ್ಯಾರ್ಥಿಗಳ ಪದವಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿ ಅರ್ಜಿಯನ್ನು ವಿಲೇವಾರಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.