ADVERTISEMENT

ಅಗತ್ಯಬಿದ್ದರೆ ಪ್ರಧಾನಿ ನಿವಾಸದ ಮಂದೆ ಧರಣಿಯೂ ಕೂರುತ್ತೇವೆ: ಅಶೋಕ್‌ ಗೆಹ್ಲೋಟ್‌

ಏಜೆನ್ಸೀಸ್
Published 25 ಜುಲೈ 2020, 16:11 IST
Last Updated 25 ಜುಲೈ 2020, 16:11 IST
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಕಾಂಗ್ರೆಸ್‌ ಮುಖಂಡರು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಮತ್ತು ಕಾಂಗ್ರೆಸ್‌ ಮುಖಂಡರು    

ಜೈಪುರ:ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಮುಂದುವರಿದಿದೆ. ಅಗತ್ಯ ಬಿದ್ದರೆ ರಾಷ್ಟ್ರಪತಿ ಅವರನ್ನು ಭೇಟಿ ಆಗುವೆ, ಮಾತ್ರವಲ್ಲ ಪ್ರಧಾನಿ ನಿವಾಸದ ಮುಂದೆ ಧರಣಿ ಕೂಡಲೂ ಸಿದ್ಧ ಎಂದು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಶನಿವಾರ ಹೇಳಿದ್ದಾರೆ.

ಪಕ್ಷದ ಶಾಸಕರು ವಾಸ್ತವ್ಯ ಹೂಡಿರುವ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಗೆಹ್ಲೋಟ್‌ ಈ ಮಾತುಗಳನ್ನಾಡಿದ್ದಾರೆ. 21 ದಿನಗಳ ಕಾಲ ಇನ್ನೂ ಹೋಟೆಲ್‌ನಲ್ಲಿಯೇ ಇರಲು ಸಿದ್ಧರಾಗುವಂತೆ ಅವರು ಶಾಸಕರಿಗೆ ಹೇಳಿದ್ದಾರೆ ಎನ್ನಲಾಗಿದ್ದು, ಸದ್ಯದ ಬಿಕ್ಕಟ್ಟು ಶೀಘ್ರವೇ ಬಗೆಹರಿಯುವ ಸಾಧ್ಯತೆ ಕಡಿಮೆ ಎಂಬುದನ್ನು ಇದು ಸಾರುತ್ತದೆ ಎಂದೇ ವಿಶ್ಲೇಷಿಸಲಾಗುತ್ತದೆ.

ಇನ್ನೊಂದೆಡೆ, ಬಹುಮತ ಸಾಬೀತು ಪಡಿಸಲು ವಿಧಾನಸಭೆ ಅಧಿವೇಶ ಕರೆಯುವಂತೆ ಕೋರಲು ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರಿಗೆ ಪರಿಷ್ಕೃತ ಪ್ರಸ್ತಾವನೆ ಸಲ್ಲಿಸಲು ಗೆಹ್ಲೋಟ್‌ ನಿರ್ಧರಿಸಿದ್ದು, ಈ ಉದ್ದೇಶಕ್ಕಾಗಿ ಮತ್ತೊಮ್ಮೆ ಸಚಿವ ಸಂಪುಟದ ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಬಿಜೆಪಿ ಪ್ರಜಾಪ್ರಭುತ್ವದ ಕೊಲೆಗೆ ಸಂಚು ರೂಪಿಸಿದೆ’ ಎಂದು ಆರೋಪಿಸಿ ಕಾಂಗ್ರೆಸ್‌ ಕಾರ್ಯಕರ್ತರು ರಾಜ್ಯದ ವಿವಿಧೆಡೆ ಶನಿವಾರ ಬೀದಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಗೆಹ್ಲೋಟ್‌ ವಿರುದ್ಧ ಬಂಡಾಯ ಎದ್ದಿರುವ ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಪ್ರಾಬಲ್ಯ ಇರುವ ದೌಸಾ ನಗರದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಜೆಪಿ ವಿರುದ್ಧ ಸೋಮವಾರ ದೇಶದಾದ್ಯಂತ ಪ್ರತಿಭಟನೆ ನಡೆಸಲೂ ಕಾಂಗ್ರೆಸ್‌ ಸಜ್ಜಾಗಿದೆ. ‘ಆಯಾ ರಾಜ್ಯಗಳಲ್ಲಿನ ರಾಜಭವನದ ಮುಂದೆ ಸೋಮವಾರ ಬೆಳಿಗ್ಗೆ 11ಕ್ಕೆ ಪ್ರದೇಶ ಕಾಂಗ್ರೆಸ್‌ ಸಮಿತಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.

‘ಪ್ರಜಾಪ್ರಭುತ್ವ ಉಳಿಸಿ– ಸಂವಿಧಾನ ಉಳಿಸಿ’ ಎಂಬ ಧ್ಯೇಯವಾಕ್ಯದೊಂದಿಗೆ ಪ್ರತಿಭಟಿಸುವ ಪಕ್ಷ, ಬಿಜಿಪಿಯ ಸಂವಿಧಾನ ಹಾಗೂ ಪ್ರಜಾತಂತ್ರ ವಿರೋಧಿ ನಿಲುವನ್ನು ಬಹಿರಂಗಗೊಳಿಸಲಿದೆ ಎಂದೂ ತಿಳಿಸಿದ್ದಾರೆ.

ಈ ನಡುವೆ, ವಿರೋಧ ಪಕ್ಷವಾದ ಬಿಜೆಪಿಯ ಮುಖಂಡರ ನಿಯೋಗ ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿದೆ. ಇನ್ನೊಂದೆಡೆ ಆಡಳಿತವೇ ಕುಸಿದು ಬಿದ್ದಿದೆ ಎಂದು ದೂರು ಸಲ್ಲಿಸಿತು.

ರಾಜ್ಯಪಾಲರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಬಿಜೆಪಿ ಸಂಸದ ರಾಜ್ಯವರ್ಧನಸಿಂಗ್‌ ರಾಠೋಡ್‌,‘ಒಂದೆಡೆ ಜನರು ಕೋವಿಡ್‌ ಪಿಡುಗಿನಿಂದ ನಲುಗಿದ್ದಾರೆ. ಆಡಳಿತಾರೂಢ ಪಕ್ಷದ ಶಾಸಕರು ಹಲವು ವಾರಗಳಿಂದ ಐಷಾರಾಮಿ ಹೋಟೆಲ್‌ನಲ್ಲಿ ಕಾಲಹರಣ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಆಡಳಿತವೆಂಬುದೇ ಇಲ್ಲ’ ಎಂದು ದೂರಿದರು.

‘ರಾಜಭವನದಲ್ಲಿ ಶುಕ್ರವಾರ ಕಾಂಗ್ರೆಸ್‌ ಮುಖಂಡರು ರಾಜ್ಯಪಾಲ ಸಮ್ಮುಖದಲ್ಲಿ ವರ್ತಿಸಿದ ರೀತಿ ಸರಿಯಲ್ಲ. ರಾಜಸ್ಥಾನದ ರಾಜಕಾರಣ ಅಧೋಗತಿಗೆ ಇಳಿದಿರುವುದನ್ನು ಈ ಘಟನೆ ತೋರುತ್ತದೆ’ ಎಂದು ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು.

‘ರಾಜ್ಯದ 8 ಕೋಟಿ ಜನರು ರಾಜಭವನಕ್ಕೆ ಮುತ್ತಿಗೆ ಹಾಕುತ್ತಾರೆ ಎಂಬುದಾಗಿ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಎಚ್ಚರಿಸಿದ್ದಾರೆ. ಈ ರೀತಿ ಪ್ರಚೋದನಕಾರಿ ಹೇಳಿಕೆ ನೀಡುವುದು ಸರಿಯಲ್ಲ. ಇಂತಹ ಹೇಳಿಕೆ ನೀಡುವವರಿಗೆ ಐಪಿಸಿ ಸೆಕ್ಷನ್‌ 124 ಅಡಿ ಶಿಕ್ಷೆ ನೀಡಬಹುದಾಗಿದೆ’ ಎಂದು ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಸತೀಶ್‌ ಪೂನಿಯಾ ಹೇಳಿದರು.

ನಾಳೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ

ಮಾಜಿ ಉಪಮುಖ್ಯಮಂತ್ರಿ ಸಚಿನ್‌ ಪೈಲಟ್‌ ಸೇರಿ 19 ಶಾಸಕರ ಅನರ್ಹತೆ ವಿಚಾರವಾಗಿ ನೀಡಿದ್ದ ನೋಟಿಸ್‌ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ಥಾನ ಹೈಕೋರ್ಟ್‌ ಈ ಮೊದಲು ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸ್ಪೀಕರ್‌ ಸಿ.ಪಿ.ಜೋಶಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜುಲೈ 27ರಂದು ನಡೆಸಲಿದೆ. ಈ ಸಂಬಂಧ ಹೈಕೋರ್ಟ್‌ ತನ್ನ ಆದೇಶ ನೀಡಬಹುದು ಎಂದು ಹೇಳಿದ್ದ ಸುಪ್ರೀಂಕೋರ್ಟ್‌, ವಿಚಾರಣೆಯನ್ನು ಮುಂದೂಡಿತ್ತು.

ಶಾಸಕರ ಅನರ್ಹಗೊಳಿಸುವ ಸ್ಪೀಕರ್‌ ಆದೇಶಕ್ಕೆ ಸಂಬಂಧಿಸಿ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.