ADVERTISEMENT

ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಸಿದ್ಧತೆ; ಹಿತಾಸಕ್ತಿ ರಕ್ಷಣೆಗೆ ಅಗತ್ಯ ಕ್ರಮ: ಭಾರತ

ಪಿಟಿಐ
Published 3 ಜನವರಿ 2025, 15:57 IST
Last Updated 3 ಜನವರಿ 2025, 15:57 IST
<div class="paragraphs"><p>ಭಾರತ-ಚೀನಾ</p></div>

ಭಾರತ-ಚೀನಾ

   

ನವದೆಹಲಿ: ‘ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ನಲ್ಲಿ ಚೀನಾ ಬೃಹತ್‌ ಅಣೆಕಟ್ಟು ನಿರ್ಮಿಸಲು ಸಿದ್ಧತೆ ನಡೆಸಿರುವುದರತ್ತ ನಿಗಾವಹಿಸ‌ಲಾಗಿದೆ. ಭಾರತದ ಹಿತಾಸಕ್ತಿ ರಕ್ಷಿಸಲು ಅಗತ್ಯ ಕ್ರಮವಹಿಸಲಾಗುವುದು’ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದೆ.

ಉದ್ದೇಶಿತ ಅಣೆಕಟ್ಟು ನಿರ್ಮಾಣ ಕುರಿತಂತೆ ಸರ್ಕಾರ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದೆ.

ADVERTISEMENT

‘ಕೆಳಹಂತದ ನದಿಪಾತ್ರದ ಪ್ರದೇಶಗಳ ಹಿತ ರಕ್ಷಿಸಲೂ ಚೀನಾ ಆದ್ಯತೆ ನೀಡಬೇಕು’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.

ಅಣೆಕಟ್ಟು ನಿರ್ಮಾಣ ಮಾಡುವುದರಿಂದ ಭಾರತದಲ್ಲಿ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಪ್ರದೇಶದಲ್ಲಿ ಪರಿಸರ ಅಸಮತೋಲನ ಉಂಟಾಗಬಹುದು ಎಂಬ ಆತಂಕವಿದೆ. ಬ್ರಹ್ಮಪುತ್ರ ನದಿಯು ಈ ಎರಡೂ ರಾಜ್ಯಗಳನ್ನು ಹಾದುಹೋಗಿದೆ.

ಕೆಳಹಂತದಲ್ಲಿರುವ ನದಿಪಾತ್ರದ ರಾಜ್ಯಗಳು ನದಿ ನೀರಿನ ಮೇಲಿನ ಹಕ್ಕು ಪ್ರತಿಪಾದಿಸಿವೆ. ತಜ್ಞರ ಹಂತದಲ್ಲಿ ಹಾಗೂ ರಾಜತಾಂತ್ರಿಕ ಮಾರ್ಗದಲ್ಲಿ ಈಗಾಗಲೇ ಈ ಆತಂಕವನ್ನು ಚೀನಾ ಸರ್ಕಾರಕ್ಕೆ ಮನವರಿಕೆ ಮಾಡಲಾಗಿದೆ ಎಂದು ತಿಳಿಸಿದರು. 

ಅಣೆಕಟ್ಟು ನಿರ್ಮಾಣ ಕುರಿತ ಇತ್ತೀಚಿನ ವರದಿಗಳ ಹಿನ್ನೆಲೆಯಲ್ಲಿ ನದಿಯ ಕೆಳಹಂತದ ರಾಷ್ಟ್ರಗಳ  ಜೊತೆಗೆ ಚರ್ಚಿಸಬೇಕು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂಬ ಆಗ್ರಹವನ್ನು ಪುನರುಚ್ಚರಿಸಲಾಗಿದೆ ಎಂದು ತಿಳಿಸಿದರು.

ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ ಪ್ರಾಂತ್ಯದಲ್ಲಿ, ಭಾರತದ ಗಡಿಗೆ ಸಮೀಪದಲ್ಲಿಯೇ ಅಂದಾಜು ₹ 11.67 ಲಕ್ಷ ಕೋಟಿ ವೆಚ್ಚದಲ್ಲಿ (137 ಬಿಲಿಯನ್‌ ಡಾಲರ್) ಬೃಹತ್ ಅಣೆಕಟ್ಟು ನಿರ್ಮಿಸಲಾಗುವುದು ಎಂದು ಚೀನಾ ಡಿಸೆಂಬರ್ 25ರಂದು ಪ್ರಕಟಿಸಿತ್ತು. 

ಚೀನಾದ ಈ ನಿರ್ಧಾರಕ್ಕೆ ಭಾರತ ಮತ್ತು ಬಾಂಗ್ಲಾದಲ್ಲಿ ಆತಂಕ ವ್ಯಕ್ತವಾಗಿತ್ತು. ಕಳೆದ ವಾರ ಪ್ರತಿಕ್ರಿಯಿಸಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೊ ನಿಂಗ್, ಇಂತಹ ಆತಂಕ ಅನಗತ್ಯ ಎಂದು ತಳ್ಳಿಹಾಕಿದ್ದರು.

ಲಭ್ಯ ಮಾಹಿತಿಗಳ ಪ್ರಕಾರ, ಬ್ರಹ್ಮಪುತ್ರ ನದಿಯು ಹಿಮಾಲಯದಲ್ಲಿ ‘ಯು’ ತಿರುವು ಪಡೆದು ಅರುಣಾಚಲ ಪ್ರದೇಶ ಹಾಗೂ ಆ ನಂತರ ಬಾಂಗ್ಲಾದೇಶದತ್ತ ಹರಿಯಲು ಆರಂಭಿಸುವ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಚೀನಾ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.