ADVERTISEMENT

ಲೋಕಸಭೆ ಚುನಾವಣೆಗೆ ಸ್ಪರ್ಧೆ: ಐಎಎಸ್‌ ಅಧಿಕಾರಿ ಶಾ ಫೈಸಲ್‌

ಪಿಟಿಐ
Published 11 ಜನವರಿ 2019, 14:00 IST
Last Updated 11 ಜನವರಿ 2019, 14:00 IST
ಶಾ ಫೈಸಲ್‌
ಶಾ ಫೈಸಲ್‌   

ಶ್ರೀನಗರ: ಹುದ್ದೆಗೆ ರಾಜೀನಾಮೆ ನೀಡಿರುವ ಐಎಎಸ್‌ ಅಧಿಕಾರಿ ಶಾ ಫೈಸಲ್‌, ಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಮತ್ತು ಸದ್ಯಕ್ಕೆ ಯಾವುದೇ ರಾಜಕೀಯ ಪಕ್ಷ ಸೇರುವುದಿಲ್ಲ ಎಂದು ಶುಕ್ರವಾರ ಇಲ್ಲಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶ್ಮೀರದ ಪ್ರತ್ಯೇಕವಾದಿಗಳ ಹುರಿಯತ್‌ ಕಾನ್ಫರೆನ್ಸ್‌ ಸೇರುವ ಸಾಧ್ಯತೆ ತಳ್ಳಿಹಾಕಿದರು. ಆಡಳಿತದಲ್ಲಿ ಆದ ಅನುಭವಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದಿಲ್ಲ ಎಂದರು.

2009ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಮೊದಲಿಗರಾಗಿ ಹೊರಹೊಮ್ಮಿ ಫೈಸಲ್ ಸುದ್ದಿಯಾಗಿದ್ದರು.

ADVERTISEMENT

ಕಾಶ್ಮೀರದ ಸಮಸ್ಯೆಗೆ ಕೇಂದ್ರ ಸರ್ಕಾರ ಪ್ರಾಮಾಣಿಕವಾಗಿ ಸ್ಪಂದಿಸುತ್ತಿಲ್ಲ. ದೇಶದಲ್ಲಿರುವ 20 ಕೋಟಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ. ಅವರು ತಲೆಎತ್ತಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಿಸಲು ಯತ್ನಿಸುತ್ತಿರುವ ಹಿಂದುತ್ವವಾದಿ ಶಕ್ತಿಗಳು, ಮುಸ್ಲಿಮರನ್ನು ಎರಡನೇ ದರ್ಜೆ ನಾಗರಿಕರಂತೆ ನಡೆಸಿಕೊಳ್ಳುತ್ತಿವೆ. ಅಲ್ಲದೆ, ಕಾಶ್ಮೀರದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಹತ್ಯೆಗಳನ್ನು ಖಂಡಿಸಿ ನನ್ನ ಹುದ್ದೆ ರಾಜೀನಾಮೆ ನೀಡುತ್ತಿರುವುದಾಗಿ ಶಾ ಫೈಸಲ್ ಫೇಸ್‌ಬುಕ್‌ನಲ್ಲಿ ತಮ್ಮ ನಿರ್ಧಾರ ಪ್ರಕಟಿಸಿದ್ದರು.

ಎಂಬಿಬಿಎಸ್‌ ಪದವೀಧರರಾದ ಫೈಸಲ್‌, ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಸೇರುವ ಸಾಧ್ಯತೆ ಇದ್ದು, ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ರಾಜಕೀಯ ಮೂಲಗಳು ತಿಳಿಸಿವೆ.

ಫೈಸಲ್‌ ಅವರು ಅಧಿಕಾರಶಾಹಿಗೆ ನೀಡಿದ ರಾಜೀನಾಮೆಯಿಂದ ಆಗಿರುವ ನಷ್ಟವನ್ನು ರಾಜಕಾರಣದಲ್ಲಿ ಭರಿಸಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.