ADVERTISEMENT

ಉನ್ನಾವ್| ವರ್ಷದಲ್ಲಿ 86 ಅತ್ಯಾಚಾರ, 185 ಲೈಂಗಿಕ ಕಿರುಕುಳ ಪ್ರಕರಣ ದಾಖಲು: ವರದಿ

ಉತ್ತರಪ್ರದೇಶದ ‘ಅತ್ಯಾಚಾರ ರಾಜಧಾನಿ’ ಉನ್ನಾವ್‌

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2019, 9:05 IST
Last Updated 7 ಡಿಸೆಂಬರ್ 2019, 9:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉನ್ನಾವ್‌:ಈ ವರ್ಷ ಉನ್ನಾವ್‌ನಲ್ಲಿ86 ಅತ್ಯಾಚಾರ ಹಾಗೂ 185 ಲೈಂಗಿಕ ಕಿರುಕುಳ ಪ್ರಕರಣಗಳು ದಾಖಲಾಗಿದ್ದು, ಉತ್ತರ ಪ್ರದೇಶದ ‘ಅತ್ಯಾಚಾರ ರಾಜಧಾನಿ’ ಎಂದೇ ಕುಖ್ಯಾತವಾಗಿದೆ.

ಉನ್ನಾವ್‌ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಯನ್ನು ಬೆಂಕಿ ಹಚ್ಚಿ ಕೊಲೆಗೈದ ಪ್ರಕರಣ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. 31 ಲಕ್ಷ ಜನಸಂಖ್ಯೆ ಇರುವ ಉನ್ನಾವ್‌ ಪ್ರದೇಶ, ಲಖನೌನಿಂದ 63 ಕಿ.ಮೀ ಹಾಗೂ ಕಾನ್ಪುರದಿಂದ 25 ಕಿ.ಮೀ ಅಂತರದಲ್ಲಿದೆ.

ಪೊಲೀಸ್‌ ವರದಿಯ ಪ್ರಕಾರ, ಜನವರಿಯಿಂದ ನವೆಂಬರ್‌ವರೆಗೆ 86 ಅತ್ಯಾಚಾರ ಪ್ರಕರಣಗಳು ಹಾಗೂ 185 ಲೈಂಗಿಕ ಕಿರುಕುಳದ ಪ್ರಕರಣಗಳು ವರದಿಯಾಗಿವೆ.

ಉನ್ನಾವ್‌ನಲ್ಲಿ ಇಷ್ಟೆಲ್ಲಾ ಪ್ರಕರಣಗಳು ನಡೆದಿದ್ದರೂ ಕುಲದೀಪ್‌ ಸೆಂಗರ್ ಆರೋಪಿಯಾಗಿರುವ ಪ್ರಕರಣ ಹಾಗೂ ಸಾಮೂಹಿಕ ಅತ್ಯಚಾರಕ್ಕೆ ಒಳಗಾಗಿ ಸಜೀವ ದಹನಗೊಂಡ ಸಂತ್ರಸ್ತೆ ಪ್ರಕರಣಗಳುಮಾತ್ರ ಭಾರಿ ಸುದ್ದಿಯಾಗಿವೆ. ಇವುಗಳನ್ನುಹೊರತುಪಡಿಸಿ ದಾಖಲಾಗಿರುವ ಇತರೆ ಪ್ರಕರಣಗಳ ಆರೋಪಿಗಳಲ್ಲಿ ಕೆಲವರುಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ, ಇನ್ನು ಕೆಲವರುತಲೆಮರೆಸಿಕೊಂಡಿದ್ದಾರೆ.

‘ನಗರದಲ್ಲಿನ ಪೊಲೀಸರು ಸಂಪೂರ್ಣ ರಾಜಕೀಯಕ್ಕೆ ಒಳಗಾಗಿದ್ದು, ತಮಗೆ ಬೇಕಾದ ರಾಜಕಾರಣಿಯ ಅನುಮತಿ ಇಲ್ಲದೆ ಒಂದು ಹೆಜ್ಜೆಯನ್ನು ಇಡದ ಸ್ಥಿತಿಯಲ್ಲಿದ್ದಾರೆ. ಪೊಲೀಸರ ಈ ನಡೆ ಅಪರಾಧಿಗಳಿಗೆ ಪ್ರೋತ್ಸಾಹ ನೀಡುತ್ತಿದೆ’ ಎಂದು ಇಲ್ಲಿನ ನಿವಾಸಿ ರಾಘವ ರಾಮ್‌ ದೂರಿದ್ದಾರೆ.

‘ಇಲ್ಲಿನ ರಾಜಕೀಯ ಪರಿಸ್ಥಿತಿಯಿಂದ ಅಪರಾಧಗಳ ಸಂಖ್ಯೆಹೆಚ್ಚಾಗುತ್ತಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ರಾಜಕಾರಣಿಗಳು ಅಪರಾಧವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೊಲೀಸರನ್ನು ಕೈಗೊಂಬೆಗಳನ್ನಾಗಿಸಿಕೊಂಡಿದ್ದಾರೆ’ ಎಂದು ವಕೀಲರೊಬ್ಬರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.