ADVERTISEMENT

ಭಾರದ ಮನಸ್ಸಿನಿಂದ ಏಕನಾಥ ಶಿಂದೆ ಅವರನ್ನು ಸಿಎಂ ಮಾಡಲಾಗಿತ್ತು: ಬಿಜೆಪಿ

ಮೃತ್ಯುಂಜಯ ಬೋಸ್
Published 23 ಜುಲೈ 2022, 14:23 IST
Last Updated 23 ಜುಲೈ 2022, 14:23 IST
ದೇವೇಂದ್ರ ಫಡಣವೀಸ್ ಹಾಗೂ ಏಕನಾಥ ಶಿಂದೆ
ದೇವೇಂದ್ರ ಫಡಣವೀಸ್ ಹಾಗೂ ಏಕನಾಥ ಶಿಂದೆ   

ಮುಂಬೈ: ಶಿವಸೇನಾ ಪಕ್ಷದ ಬಂಡಾಯ ನಾಯಕ ಏಕನಾಥ ಶಿಂದೆ ಅವರನ್ನು ಭಾರದ ಮನಸ್ಸಿನಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು ಎಂದು ಮಹಾರಾಷ್ಟ್ರ ಬಿಜೆಪಿ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಶನಿವಾರ ಹೇಳಿದ್ದಾರೆ.

ರಾಯಗಢ ಜಿಲ್ಲೆಯಲ್ಲಿ ನಡೆದ ಮಹಾರಾಷ್ಟ್ರ ಬಿಜೆಪಿ ರಾಜ್ಯ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಅಧ್ಯಕ್ಷರ ಹೇಳಿಕೆಯು ರಾಜಕೀಯ ವಲಯದಲ್ಲಿ ಗೊಂದಲ ಸೃಷ್ಟಿ ಮಾಡಲು ಕಾರಣವಾಗಿದೆ.

ಸ್ಥಿರ ಸರ್ಕಾರ ರಚಿಸುವುದು ಹಾಗೂ ಸ್ಪಷ್ಟವಾದ ಸಂದೇಶ ರವಾನಿಸುವ ಉದ್ದೇಶದೊಂದಿಗೆ ಭಾರದ ಹೃದಯದಿಂದ ದೇವೇಂದ್ರ ಫಡಣವೀಸ್ ಬದಲು ಏಕನಾಥ ಶಿಂದೆ ಅವರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು ಎಂದು ಪಾಟೀಲ್ ಹೇಳಿದ್ದಾರೆ.

ಈ ನೋವನ್ನು ಅರಗಿಸಿಕೊಂಡು ಸಂತೋಷದಿಂದ ಮುಂದಕ್ಕೆ ಹೆಜ್ಜೆ ಇಟ್ಟಿದ್ದೇವೆ ಎಂದೂ ಹೇಳಿದರು.

ಕಳೆದ ತಿಂಗಳು ಅಚ್ಚರಿಯ ನಿರ್ಧಾರ ಕೈಗೊಂಡಿದ್ದ ಬಿಜೆಪಿ, ದೇವೇಂದ್ರ ಫಡಣವೀಸ್ ಬದಲು ಏಕನಾಥ ಶಿಂದೆ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿತ್ತು.

ನೂತನ ಸರ್ಕಾರದಲ್ಲಿ ಯಾವುದೇ ಹುದ್ದೆ ನಿರ್ವಹಿಸುವುದಿಲ್ಲ ಎಂದು ಹೇಳಿದ್ದ ಫಡಣವೀಸ್ ಅವರು ಬಳಿಕ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಶಿವಸೇನಾ ಪಕ್ಷದಿಂದ ಏಕನಾಥ ಶಿಂದೆ ಹಾಗೂ ಬೆಂಬಲಿಗರು ಬಂಡಾಯವೆದ್ದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಪತನಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.