
ನವದೆಹಲಿ: ‘ಪ್ರಸಕ್ತ ಆರ್ಥಿಕ ವರ್ಷದ (2025–26) ಮಹಿಳೆಯರಿಗೆ ನೇರ ನಗದು ಯೋಜನೆಗಾಗಿ ದೇಶದ 12 ರಾಜ್ಯಗಳು ₹1.68 ಲಕ್ಷ ಕೋಟಿಯನ್ನು ಮೀಸಲಿಟ್ಟಿದೆ’ ಎಂದು ಪಿಆರ್‌ಎಸ್ ಲೆಜಿಸ್ಲೇಟಿವ್ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.
ಮೂರು ವರ್ಷಗಳ ಹಿಂದೆ ಕೇವಲ 2 ರಾಜ್ಯಗಳು ಮಾತ್ರ ಮಹಿಳೆಯರಿಗೆ ನಗದು ನೀಡುವ ಯೋಜನೆಗಳನ್ನು ಹೊಂದಿದ್ದವು. ಇಂಥ ಸೌಲಭ್ಯ ನೀಡುತ್ತಿರುವ ರಾಜ್ಯಗಳ ಸಂಖ್ಯೆ ಈಗ 12ಕ್ಕೆ ಏರಿಕೆಯಾಗಿದೆ. ಆದರೆ 12ರಲ್ಲಿ ಆರು ರಾಜ್ಯಗಳ ಆದಾಯ ಕೊರತೆಯನ್ನು ಈ ವರ್ಷ ಎದುರಿಸುವುದಾಗಿ ಹೇಳಿಕೊಂಡಿವೆ. ಮಹಿಳಾ ಕೇಂದ್ರಿತ ಕಲ್ಯಾಣ ಯೋಜನೆಗಳು ತ್ವರಿತವಾಗಿ ವಿಸ್ತರಣೆಗೊಳ್ಳುತ್ತಿವೆ. ಇವುಗಳಿಂದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ ಎಂದು ವರದಿ ಮಾಡಿದೆ.
ಷರತ್ತು ರಹಿತ ನಗದು ವರ್ಗಾವಣೆ (UCT) ಯೋಜನೆಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರ ಸಬಲೀಕರಣಕ್ಕೆ ಮಾಸಿಕ ನೇರ ನಗದು ಪಾವತಿ ಸೌಲಭ್ಯಗಳನ್ನು ರಾಜ್ಯಗಳು ಜಾರಿಗೆ ತಂದಿವೆ.
ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳು ತಮ್ಮ ಬಜೆಟ್‌ನಲ್ಲಿ ಮಹಿಳೆಯರಿಗೆ ಮೀಸಲಿಡುವ ಹಣದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿವೆ. ಹಿಂದಿನ ಬಜೆಟ್‌ನಲ್ಲಿ ಮಹಿಳೆಯರಿಗೆ ಶೇ 15ರಷ್ಟು ಮೀಸಲಿಟ್ಟಿದ್ದ ಈ ರಾಜ್ಯಗಳು, ಈಗ ಶೇ 31ಕ್ಕೆ ಹೆಚ್ಚಿಸಿವೆ.
ತಮಿಳುನಾಡಿನ ಕಲೈಗ್ನರ್ ಮಗಳಿರ್ ಉರಿಮೈ ತೊಗೈ ತಿಟ್ಟಂ, ಮಧ್ಯಪ್ರದೇಶದ ಲಾಡ್ಲಿ ಬೆಹ್ನಾ ಯೋಜನೆ, ಕರ್ನಾಟಕದ ಗೃಹ ಲಕ್ಷ್ಮಿ ಯೋಜನೆಗಳ ಮೂಲಕ ಸರ್ಕಾರಗಳು ಮಹಿಳೆಯರಿಗೆ ಮಾಸಿಕ ₹1000ದಿಂದ ₹1,500 ನಗದು ನೀಡುತ್ತಿವೆ. ಇದು ಒಂದೆಡೆ ಮಹಿಳೆಯರ ಸಬಲೀಕರಣಕ್ಕೆ ರಾಜ್ಯಗಳು ಕೈಗೊಂಡ ಜನಪ್ರಿಯ ಕಾರ್ಯಕ್ರಮಗಳು. ಆದರೆ ಇಂಥ ಯೋಜನೆಗಳು ರಾಜ್ಯಗಳ ಬೊಕ್ಕಸಕ್ಕೆ ದೊಡ್ಡ ಹೊರೆಯಾಗಿವೆ ಎಂದೂ ಈ ವರದಿ ಎಚ್ಚರಿಸಿದೆ.
ಕರ್ನಾಟಕವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, UCT ವೆಚ್ಚವನ್ನು ಪರಿಗಣಿಸದಿದ್ದರೂ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ 0.6ರಿಂದ ಶೇ 0.3ಕ್ಕೆ ಕುಸಿದಿದೆ. ಮತ್ತೊಂದೆಡೆ ಮಧ್ಯಪ್ರದೇಶದಲ್ಲಿ ಇದು ಕೊರತೆಯ ಪ್ರಮಾಣ ಶೇ 0.4ರಿಂದ ಶೇ 1.1ಕ್ಕೆ ಏರಿ ಸುಧಾರಿಸಿದೆ ಎಂದೂ ಈ ವರದಿ ಹೇಳಿದೆ.
ಸಬ್ಸಿಡಿ, ಯುವಕರು, ಮಹಿಳೆಯರು ಮತ್ತು ರೈತರಿಗೆ ನಗದು ವರ್ಗಾವಣೆ ಯೋಜನೆಗಳಿಂದ ಉತ್ಪಾದಕ ವೆಚ್ಚಗಳಿಗೆ ಹಣ ಸಾಕಾಗುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಈ ಹಿಂದೆಯೇ ಎಚ್ಚರಿಕೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.
ಮಹಾರಾಷ್ಟ್ರ ಸರ್ಕಾರವು ಏಪ್ರಿಲ್ 2025 ರಲ್ಲಿ ‘ಸಿಎಂ ಲಡ್ಕಿ ಬಹಿನ್’ ಯೋಜನೆಯಡಿ ಮಾಸಿಕ ಪಾವತಿಯನ್ನು ಕಡಿತಗೊಳಿಸಿ ತನ್ನ ವಿತ್ತೀಯ ಕೊರತೆಯನ್ನು ಸರಿಪಡಿಸಲು ಪ್ರಯತ್ನಿಸಿತು. ಮತ್ತೊಂದೆಡೆ ಜಾರ್ಖಂಡ್ ಸರ್ಕಾರವು 2024ರ ಕೊನೆಯಲ್ಲಿ ‘ಸಿಎಂ ಮೈಯಾನ್ ಸಮ್ಮಾನ್’ ಯೋಜನೆಯಡಿಯಲ್ಲಿ ಪಾವತಿಗಳನ್ನು ತಿಂಗಳಿಗೆ ₹2,500 ಕ್ಕೆ ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.