ADVERTISEMENT

ಮಹಿಳೆಯರು ಹಳೆಯ ಸಂಪ್ರದಾಯಗಳಿಂದ ಮುಕ್ತರಾಗಬೇಕು: ಮೋಹನ್‌ ಭಾಗವತ್

ಪಿಟಿಐ
Published 18 ಜುಲೈ 2025, 13:26 IST
Last Updated 18 ಜುಲೈ 2025, 13:26 IST
   

ಪುಣೆ: ಯಾವುದೇ ರಾಷ್ಟ್ರದ ಪ್ರಗತಿಗೆ ಮಹಿಳಾ ಸಬಲೀಕರಣ ಅತ್ಯಗತ್ಯ ಮತ್ತು ಅವರನ್ನು ಹಳೆಯ ಸಂಪ್ರದಾಯಗಳಿಂದ ಮುಕ್ತಗೊಳಿಸಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಸೋಲಾಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಭಾಗವತ್, ಮಹಿಳೆಯರು ಯಾವುದೇ ಸಮಾಜದ ಪ್ರಮುಖ ಭಾಗ. ಒಬ್ಬ ಪುರುಷನು ತನ್ನ ಜೀವನದುದ್ದಕ್ಕೂ ಕೆಲಸ ಮಾಡುತ್ತಾನೆ. ಹಾಗೆಯೇ, ಮಹಿಳೆಯೂ ಕೂಡ ಕೆಲಸ ಮಾಡುತ್ತಾಳೆ. ಆದರೆ ಅದನ್ನು ಮೀರಿ, ಅವಳು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಾಳೆ. ಅವಳ ಪ್ರೀತಿ ಮತ್ತು ವಾತ್ಸಲ್ಯದಲ್ಲಿ ಮಕ್ಕಳು ಬೆಳೆದು ಪ್ರಬುದ್ಧರಾಗುತ್ತಾರೆ ಎಂದಿದ್ದಾರೆ.

ಮಹಿಳಾ ಸಬಲೀಕರಣ ಸಮಾಜಕ್ಕೆ ಮಾತ್ರವಲ್ಲದೆ ಇಡೀ ದೇಶದ ಅಭಿವೃದ್ಧಿಗೆ ಅತ್ಯಗತ್ಯ. ದೇವರು ಮಹಿಳೆಯರಿಗೆ ವಿಶಿಷ್ಟ ಶಕ್ತಿಯನ್ನು ನೀಡಿದ್ದಾನೆ. ಇದರಿಂದಾಗಿ ಅವರು ಪುರುಷರಿಗೆ ಸಮಾನವಾಗಿ ಪ್ರತಿಯೊಂದು ಕೆಲಸವನ್ನು ಹಾಗೂ ಪುರುಷರು ಮಾಡಲು ಸಾಧ್ಯವಾಗದ ಕೆಲಸವನ್ನೂ ಮಾಡಬಲ್ಲರು ಎಂದಿದ್ದಾರೆ.

ADVERTISEMENT

ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುತ್ತೇವೆ ಎಂದು ಪುರುಷರು ಹೇಳಿಕೊಳ್ಳುವುದು ಮೂರ್ಖತನ. ಈ ರೀತಿ ಯೋಚಿಸುವ ಅಗತ್ಯವಿಲ್ಲ. ಮಹಿಳೆಯರನ್ನು ಸ್ವತಂತ್ರವಾಗಿ ಬಿಡಬೇಕು. ಅವರನ್ನು ಹಿಂದುಳಿದ ಸಂಪ್ರದಾಯಗಳಿಂದ ಮುಕ್ತಗೊಳಿಸಬೇಕು. ಮಹಿಳೆ ತನ್ನನ್ನು ತಾನು ಉನ್ನತೀಕರಿಸಿಕೊಂಡಾಗ, ಅವಳು ಇಡೀ ಸಮಾಜವನ್ನು ಮುಂದಕ್ಕೆ ಕೊಂಡೊಯ್ಯುತ್ತಾಳೆ ಎಂದು ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.