ADVERTISEMENT

ಮನೆಯಿಂದ ಕೆಲಸ: ಮಾರ್ಗಸೂಚಿ ಪ್ರಕಟಿಸಿದ ಸಿಬ್ಬಂದಿ ಸಚಿವಾಲಯ

ವರ್ಷದಲ್ಲಿ 15 ದಿನಗಳ ಆಯ್ಕೆ: ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯ

​ಪ್ರಜಾವಾಣಿ ವಾರ್ತೆ
Published 14 ಮೇ 2020, 19:45 IST
Last Updated 14 ಮೇ 2020, 19:45 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕವೂ ಮನೆಯಿಂದಲೇ ಕೆಲಸ ಮಾಡುವ ಕೇಂದ್ರ ಸರ್ಕಾರಿ ನೌಕರರಿಗೆ ಸಿಬ್ಬಂದಿ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ಅರ್ಹ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ವರ್ಷದಲ್ಲಿ 15 ದಿನಗಳ ಕಾಲ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡುವ ಸಾಧ್ಯತೆಗಳ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.

48.34 ಲಕ್ಷ ಕೇಂದ್ರ ಸರ್ಕಾರಿ ನೌಕರರಿದ್ದಾರೆ. ಕೋವಿಡ್‌–19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಕಚೇರಿಗಳಲ್ಲಿಯೂ ಅಂತರ ಕಾಪಾಡುವುದು ಅನಿವಾರ್ಯ. ಈಗಾಗಲೇ ಹಲವು ಸಚಿವಾಲಯಗಳು ಮತ್ತು ಇಲಾಖೆಗಳು ಕಂಪ್ಯೂಟರ್‌ ವ್ಯವಸ್ಥೆ ಹೊಂದಿರುವ ‘ಇ–ಕಚೇರಿ’ ಮತ್ತು ವಿಡಿಯೊ ಕಾನ್ಫೆರೆನ್ಸ್‌ ಮೂಲಕ ಕಾರ್ಯನಿರ್ವಹಿಸಿವೆ. ಭವಿಷ್ಯದಲ್ಲೂ ಕಚೇರಿಗಳಲ್ಲಿ ಕಡಿಮೆ ಸಿಬ್ಬಂದಿ ಹಾಜರಾತಿ ಮತ್ತು ಪಾಳಿ ಪ್ರಕಾರ ಕಾರ್ಯನಿರ್ವಹಿಸಬೇಕಾಗಿದೆ. ಉಳಿದವರು ಮನೆಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ADVERTISEMENT

ನೌಕರರಿಗೆ ಲ್ಯಾಪ್‌ಟಾಪ್‌ ಅಥವಾ ಡೆಸ್ಕ್‌ಟಾಪ್‌ಗಳನ್ನು ಆಯಾ ಇಲಾಖೆಗಳು ಒದಗಿಸಲಿವೆ. ಮನೆಯಿಂದ ಕೆಲಸ ಮಾಡುವ ಇಂಟರ್‌ನೆಟ್‌ ಬಿಲ್‌ ಅನ್ನು ಮರುಪಾವತಿ ಮಾಡಿಕೊಳ್ಳುವ ಅವಕಾಶವಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಸದ್ಯಕ್ಕೆ 75 ಇಲಾಖೆಗಳು ‘ಇ–ಕಚೇರಿ’ ವ್ಯವಸ್ಥೆಯನ್ನು ಬಳಸುತ್ತಿವೆ. ಇವುಗಳಲ್ಲಿ 57 ಇಲಾಖೆಗಳು ಶೇಕಡ 80ರಷ್ಟು ಪ್ರಗತಿ ಸಾಧಿಸಿವೆ. ಆದರೆ, ಸರ್ಕಾರಿ ಇಲಾಖೆಗಳಲ್ಲಿನ ಮಾಹಿತಿಯ ಸುರಕ್ಷತೆ ಮತ್ತು ಭದ್ರತೆಯೂ ಮುಖ್ಯವಾಗಿದೆ. ವರ್ಗೀಕೃತ ದಾಖಲೆಗಳು ಅಥವಾ ಕಡತಗಳಿಗೆ ಸಂಬಂಧಿಸಿದ ಕಾರ್ಯವನ್ನು ಮನೆಯಲ್ಲಿ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ವರ್ಗೀಕೃತ ಮಾಹಿತಿಗೆ ಸಂಬಂಧಿಸಿದ ಕಾರ್ಯಗಳನ್ನು ‘ಇ–ಕಚೇರಿ’ ವ್ಯವಸ್ಥೆಯ ಮೂಲಕ ಕೈಗೊಳ್ಳಬಾರದು ಎಂದು ಗೃಹ ಸಚಿವಾಲಯವೂ ಸೂಚಿಸಿದೆ. ಹೀಗಾಗಿ, ಇಂತಹ ಕಾರ್ಯಗಳಿಗೆ ಅವಕಾಶವಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವರ್ಗೀಕೃತ ಕಡತಗಳು ಅಥವಾ ಮಾಹಿತಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ಗೃಹ ಸಚಿವಾಲಯದ ಜತೆ ಸಮಾಲೋಚನೆ ನಡೆಸಿ ‘ಇ–ಕಚೇರಿ’ ವ್ಯವಸ್ಥೆ ಬಗ್ಗೆ ಸೂಕ್ತ ಮಾರ್ಗಸೂಚಿಗಳನ್ನು ನೀಡಲಿದೆ ಎಂದು ತಿಳಿಸಿದೆ.

ಇಲಾಖೆಗಳು ನೀಡುವ ಲ್ಯಾಪ್‌ಟಾಪ್‌ನಲ್ಲೇ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅನಧಿಕೃತ ವೆಬ್‌ಸೈಟ್‌ಗಳು ಮತ್ತು ವೈರಸ್‌ಗಳಿಂದ ರಕ್ಷಣೆ ದೊರೆಯುವಂತೆ ಎನ್‌ಐಸಿ ಕ್ರಮಕೈಗೊಳ್ಳಲಿದೆ. ಅಧಿಕಾರಿಗಳು ಸಹ ಯಾವುದೇ ಮಾಹಿತಿ ಕಳ್ಳತನವಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.

ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳು ಮೇ 21ರೊಳಗೆ ಈ ವ್ಯವಸ್ಥೆ ಬಗ್ಗೆ ಉತ್ತರ ನೀಡಬೇಕು ಎಂದು ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.