ADVERTISEMENT

ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಭಾರತ ಮುಂದುವರಿಯಲಿದೆ: ಮೋದಿ

ವಿಶ್ವ ಬ್ಯಾಂಕ್‌ ವರದಿ ಉಲ್ಲೇಖ

ಪಿಟಿಐ
Published 24 ಫೆಬ್ರುವರಿ 2025, 12:36 IST
Last Updated 24 ಫೆಬ್ರುವರಿ 2025, 12:36 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ಭೋಪಾಲ್‌: ಮುಂಬರುವ ವರ್ಷಗಳಲ್ಲಿಯೂ ಭಾರತವು ಅತಿ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ವಿಶ್ವ ಬ್ಯಾಂಕ್‌ ವ್ಯಕ್ತಪಡಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ತಿಳಿಸಿದರು.

‘ಇನ್‌ವೆಸ್ಟ್‌ ಮಧ್ಯಪ್ರದೇಶ–ಜಾಗತಿಕ ಹೂಡಿಕೆದಾರರ ಸಮಾವೇಶ–2025’ ಉದ್ಘಾಟಿಸಿದ ನಂತರ ಅವರು ಮಾತನಾಡಿದರು.

ಭಾರತವು ಜಾಗತಿಕ ವೈಮಾನಿಕ ಸಂಸ್ಥೆಗಳಿಗೆ ಅಗತ್ಯವಿರುವ ಸಾಧನಗಳನ್ನು ಪೂರೈಸುವ ಪ್ರಮುಖ ರಾಷ್ಟ್ರವಾಗಿದೆ. ಜವಳಿ, ಪ್ರವಾಸೋಧ್ಯಮ ಮತ್ತು ತಂತ್ರಜ್ಞಾನ ವಲಯಗಳಲ್ಲಿ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

ADVERTISEMENT

ಡಬಲ್‌ ಎಂಜಿನ್‌ ಸರ್ಕಾರ ಸ್ಥಾಪನೆ ಬಳಿಕ ಮಧ್ಯಪ್ರದೇಶ ರಾಜ್ಯದ ಅಭಿವೃದ್ಧಿಯ ವೇಗ ದುಪ್ಪಟ್ಟಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು, ಮಧ್ಯಪ್ರದೇಶ ಸರ್ಕಾರದ 18 ನೀತಿಗಳಿಗೆ ಚಾಲನೆ ನೀಡಿದರು.

ವಿಶ್ವ ಬ್ಯಾಂಕ್‌  ಇತ್ತೀಚೆಗೆ ತನ್ನ ‘ಜಾಗತಿಕ ಆರ್ಥಿಕ ಹೊರನೋಟ’ ವರದಿಯಲ್ಲಿ, ಭಾರತವು ಮುಂದಿನ ಎರಡು ವರ್ಷವೂ ಅತಿ ವೇಗವಾಗಿ ಬೆಳವಣಿಗೆ ಹೊಂದುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿಯಲಿದೆ ಎಂದು ಹೇಳಿತ್ತು. 

ಕ್ಷಮೆಯಾಚಿಸಿದ ಪ್ರಧಾನಿ

ಕಾರ್ಯಕ್ರಮಕ್ಕೆ 10–15 ನಿಮಿಷ ತಡವಾಗಿ ಬಂದಿದ್ದ ಪ್ರಧಾನಿ ಮೋದಿ ಅವರು ನಂತರ ತಮ್ಮ ಭಾಷಣದ ವೇಳೆ ಸಭಿಕರ ಕ್ಷಮೆ ಕೇಳಿದರು. ತಡವಾಗಿ ಬಂದಿದ್ದಕ್ಕೆ ಕಾರಣವನ್ನೂ ವಿವರಿಸಿದರು.

‘ನಾನು ಭಾನುವಾರವೇ ರಾಜ್ಯಕ್ಕೆ ಬಂದಿದ್ದೆ. 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದು ಗೊತ್ತಾಯಿತು. ರಾಜಭವನದಿಂದ  ನಾನು ಹೊರಡುವ ಸಮಯ ಮತ್ತು ಮಕ್ಕಳ ಪರೀಕ್ಷಾ ಸಮಯ ಎರಡೂ ಒಂದೇ ಆಗಿತ್ತು. ಭದ್ರತಾ ಕಾರಣಗಳಿಂದ ಕೆಲ ರಸ್ತೆಗಳನ್ನು ಮುಚ್ಚುವ ಸಾಧ್ಯತೆ ಇರುತ್ತದೆ. ಇದರಿಂದ ಮಕ್ಕಳಿಗೆ ಪರೀಕ್ಷೆಗೆ ತೆರಳಲು ಅನನುಕೂಲವಾಗುತ್ತದೆ ಎಂದು ಭಾವಿಸಿ ಸ್ವಲ್ಪ ತಡವಾಗಿ ಹೊರಟೆ’ ಎಂದು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.