ADVERTISEMENT

ಭಯೋತ್ಪಾದಕ ದಾಳಿ: ಟ್ರಂಪ್, ಪುಟಿನ್, ನೆತನ್ಯಾಹು ಸೇರಿ ಜಾಗತಿಕ ನಾಯಕರ ಖಂಡನೆ

ಪಿಟಿಐ
Published 23 ಏಪ್ರಿಲ್ 2025, 3:08 IST
Last Updated 23 ಏಪ್ರಿಲ್ 2025, 3:08 IST
<div class="paragraphs"><p>ವ್ಲಾಡಿಮಿರ್ ಪುಟಿನ್ ಹಾಗೂ ಡೊನಾಲ್ಡ್ ಟ್ರಂಪ್</p></div>

ವ್ಲಾಡಿಮಿರ್ ಪುಟಿನ್ ಹಾಗೂ ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್/ಮಾಸ್ಕೊ: 28 ಜನರ ಸಾವಿಗೆ ಕಾರಣವಾದ ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕ ದಾಳಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೇರಿದಂತೆ ವಿಶ್ವ ನಾಯಕರು ಖಂಡಿಸಿದ್ದು, ಭಾರತದ ಜೊತೆಗೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಭಾರತಕ್ಕೆ ಸಂಪೂರ್ಣ ಬೆಂಬಲ

ADVERTISEMENT

ಪ್ರಧಾನಿ ನರೇಂದ್ರ ಮೋದಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಟ್ರಂಪ್, ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಘೋರ ದಾಳಿಯ ಅಪರಾಧಿಗಳನ್ನು ಶಿಕ್ಷಿಸಲು ಭಾರತಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಅಮಾಯಕರ ಜೀವಹಾನಿಗೆ ಟ್ರಂಪ್ ತೀವ್ರ ಸಂತಾಪ ಸೂಚಿಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಒಟ್ಟಾಗಿ ನಿಂತಿವೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್‌ ಮಾಡಿದ್ದ, ಟ್ರಂಪ್, ಕಾಶ್ಮೀರದಿಂದ ಆತಂಕಕಾರಿ ಸುದ್ದಿ ಬಂದಿದೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಭಾರತದೊಂದಿಗೆ ಅಮೆರಿಕ ಬಲವಾಗಿ ನಿಂತಿದೆ ಎಂದು ಹೇಳಿದ್ದರು.

ಕ್ರೂರ ಅಪರಾಧಕ್ಕೆ ಯಾವುದೇ ಸಮರ್ಥನೆ ಇಲ್ಲ

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡಿದ್ದಾರೆ. ಕ್ರೂರ ಅಪರಾಧಕ್ಕೆ ಯಾವುದೇ ಸಮರ್ಥನೆ ಇಲ್ಲ. ಅಪರಾಧಿಗಳು ಅರ್ಹ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿ ಭಾರತೀಯದೊಂದಿಗೆ ಎಲ್ಲಾ ರೀತಿಯ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ರಷ್ಯಾದ ಬದ್ಧತೆಯನ್ನು ಪುಟಿನ್ ಪುನರುಚ್ಚರಿಸಿದರು.

‘ದಯವಿಟ್ಟು ಮೃತರ ಬಂಧುಗಳು ಮತ್ತು ಆತ್ಮೀಯರಿಗೆ ನನ್ನ ಸಂತಾಪ ತಲುಪಿಸಿ, ಗಾಯಗೊಂಡವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ’ಎಂದು ಅವರು ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಪಟ್ಟಣದ ಬಳಿಯ ಪ್ರಸಿದ್ಧ ಹುಲ್ಲುಗಾವಲಿನಲ್ಲಿ ಮಂಗಳವಾರ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದು, ಇದರಲ್ಲಿ 28 ಮಂದಿ ಮೃತಪಟ್ಟಿದ್ದಾರೆ. 2019ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ.

ಪಾಕಿಸ್ತಾನ ಮೂಲದ ಲಷ್ಕರ್-ಎ-ತಯ್ಯಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಜೊತೆ ನಂಟು ಹೊಂದಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಪಿ) ಈ ದಾಳಿ ಹೊಣೆ ಹೊತ್ತುಕೊಂಡಿದೆ.

‘ಇಸ್ರೇಲ್, ಭಾರತದೊಂದಿಗೆ ನಿಂತಿದೆ‘

‘ಡಜನ್‌ಗಟ್ಟಲೆ ಅಮಾಯಕರ ಸಾವಿಗೆ ಕಾರಣವಾದ ಅಮಾನುಷ ಭಯೋತ್ಪಾದಕ ದಾಳಿಯಿಂದ ತೀವ್ರ ದುಃಖಿತರಾಗಿದ್ದೇವೆ’ ಎಂದು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮೃತರ ಕುಟುಂಬಗಳಿಗೆ ನಾನು ಸಂತಾಪ ಸೂಚಿಸುತ್ತೇನೆ. ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಸ್ರೇಲ್, ಭಾರತದೊಂದಿಗೆ ನಿಂತಿದೆ ಎಂದು ಅವರು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ತಾವು ತೀವ್ರವಾಗಿ ದುಃಖಿತರಾಗಿದ್ದೇವೆ ಎಂದು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದಾರೆ. ಸಂತ್ರಸ್ತ ಕುಟುಂಬಗಳು, ಗಾಯಗೊಂಡವರು, ಸರ್ಕಾರ ಮತ್ತು ಇಡೀ ಭಾರತೀಯರಿಗೆ ಅವರು ಸಂತಾಪ ಸೂಚಿಸಿದ್ಧಾರೆ.

ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಭಾರತದ ಚೊಚ್ಚಲ ಭೇಟಿಯ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ವಿನಾಶಕಾರಿ ಭಯೋತ್ಪಾದಕ ದಾಳಿಯಲ್ಲಿ ಮೃತರ ಕುಟುಂಬಗಳಿಗೆ ವ್ಯಾನ್ಸ್ ತಮ್ಮ ಸಂತಾಪ ಸೂಚಿಸಿದ್ದಾರೆ.

‘ಭಾರತದ ಪಹಲ್ಗಾಮ್‌ನಲ್ಲಿ ನಡೆದ ವಿನಾಶಕಾರಿ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಉಷಾ ಮತ್ತು ನಾನು ನಮ್ಮ ಸಂತಾಪ ಸೂಚಿಸುತ್ತೇವೆ. ಕಳೆದ ಕೆಲವು ದಿನಗಳಿಂದ, ಈ ದೇಶ ಮತ್ತು ಅದರ ಜನರ ಜೊತೆಗಿದ್ದೇವೆ. ಈ ಭಯಾನಕ ದಾಳಿಯ ನಡುವೆ ಅವರು ಶೋಕಿಸುತ್ತಿರುವಾಗ ನಾವು ಅವರ ನೋವನ್ನು ಹಂಚಿಕೊಳ್ಳಲು ಬಯಸುತ್ತೇವೆ’ ಎಂದು ತಿಳಿಸಿದ್ಧಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಿಂದ ತಮ್ಮ ದೇಶವು ತೀವ್ರ ದುಃಖಿತವಾಗಿದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.