ADVERTISEMENT

ಬ್ರಿಜ್ ಭೂಷಣ್ ವಿರುದ್ಧ ಕ್ರಮದ ಭರವಸೆ: ಕುಸ್ತಿಪಟುಗಳ ಧರಣಿ ತಾತ್ಕಾಲಿಕ ಸ್ಥಗಿತ

ಕ್ರಮದ ಭರವಸೆ ನೀಡಿದ ಸರ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2023, 14:25 IST
Last Updated 7 ಜೂನ್ 2023, 14:25 IST
ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್
ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್   

ನವದೆಹಲಿ: ಪ್ರತಿಭಟನೆ ಆರಂಭಿಸಿ 45 ದಿನಗಳ ಬಳಿಕ ಕುಸ್ತಿಪಟುಗಳು ಮತ್ತು ಸರ್ಕಾರದ ನಡುವಣ ಮಾತುಕತೆ ಬುಧವಾರ ಫಲಪ್ರದವಾಗಿದೆ. ಭಾರತೀಯ ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ಬ್ರಿಜ್‌ ಭೂಷಣ್‌ ಮೇಲೆ ಇರುವ ಲೈಂಗಿಕ ಕಿರುಕುಳ ಆರೋಪದ ಕುರಿತು 15 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಸರ್ಕಾರ ಭರವಸೆ ಕೊಟ್ಟಿದೆ. ಹೀಗಾಗಿ ಜೂನ್‌ 15ರವರೆಗೆ ಪ್ರತಿಭಟನೆ ಮಾಡದಿರಲು ಕುಸ್ತಿಪಟುಗಳು ನಿರ್ಧರಿಸಿದ್ದಾರೆ. 

ಕ್ರೀಡಾ ಸಚಿವ ಅನುರಾಗ್‌ ಠಾಕೂರ್ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳೊಂದಿಗೆ ತಮ್ಮ ನಿವಾಸದಲ್ಲಿ ಸುದೀರ್ಘ ಆರು ತಾಸು ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಅವರು ತಿಳಿಸಿದರು. ಫೆಡರೇಷನ್‌ಗೆ ಜೂನ್ 30ರೊಳಗೆ ಚುನಾವಣೆ ನಡೆಸಲಾಗುವುದು ಎಂದರು.

‘ಲೈಂಗಿಕ ಕಿರುಕುಳದಂತಹ ದೂರುಗಳ ವಿಚಾರಣೆಗಾಗಿ ಮಹಿಳೆಯೊಬ್ಬರ ನೇತೃತ್ವದಲ್ಲಿ ಆಂತರಿಕ ಸಮಿತಿ ರಚನೆಗೆ ಒಪ್ಪಿಗೆ ನೀಡಲಾಗಿದೆ’ ಎಂದು ಹೇಳಿದರು.

ADVERTISEMENT

‘ವಿವಿಧ ತರಬೇತಿ ಸಂಸ್ಥೆಗಳು ಹಾಗೂ ಕ್ರೀಡಾಪಟುಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂದಕ್ಕೆ ಪಡೆಯಬೇಕು ಎಂಬುದು ಕುಸ್ತಿಪಟುಗಳ ಬೇಡಿಕೆಯಾಗಿತ್ತು. ಬ್ರಿಜ್‌ಭೂಷಣ್‌ ಸಿಂಗ್‌ ಹಾಗೂ ಅವರ ಆಪ್ತರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬಾರದು ಎಂಬ ಬೇಡಿಕೆಯನ್ನೂ ಇಟ್ಟಿದ್ದರು. ಈ ಎಲ್ಲ ಬೇಡಿಕೆಗಳಿಗೆ ಸಮ್ಮತಿಸಲಾಗಿದೆ ’ ಎಂದು ಸಚಿವ ಠಾಕೂರ್‌ ಅವರು ಹೇಳಿದರು.

‘ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟ’: ಸಭೆ ನಂತರ, ಸುದ್ದಿಗಾರ ರೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಕುಸ್ತಿಪಟು ಸಾಕ್ಷಿ ಮಲಿಕ್, ‘ಜೂನ್‌ 15ರ ವರೆಗೆ ನಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗುವುದು. ಅಷ್ಟ ರೊಳಗೆ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಹೋರಾಟವನ್ನು ಮತ್ತೆ ಆರಂಭಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪ್ರಮುಖ ಅಂಶಗಳು

* ಬಜರಂಗ್ ಪೂನಿಯಾ, ಸಾಕ್ಷಿ ಮಲಿಕ್‌ ಪತಿ ಸತ್ಯವರ್ತ ಕಡಿಯಾನ್‌, ಜಿತೇಂದ್ರ ಕಿನ್ಹ ಭಾಗಿ. ವಿನೇಶಾ ಫೋಗಟ್ ಸಭೆಗೆ ಗೈರು

* ಸರ್ಕಾರ ಮತ್ತು ಕುಸ್ತಿಪಟುಗಳ ನಡುವಣ ಎರಡನೇ ಸಭೆ ಇದು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದ ಶನಿವಾರ ಸಭೆ ನಡೆಸಿದ್ದರು

* ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳ ವಿರುದ್ಧ ಮೇ 28ರಂದು ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳನ್ನು ಕೂಡ ಹಿಂಪಡೆಯುವ ಭರವಸೆಯನ್ನು ಕೊಡಲಾಗಿದೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.